ನವ ದೆಹಲಿ: ಭಾರತದ ವಿದೇಶಾಂಗ ನೀತಿಯನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದಾರೆ. ಹಾಗೇ ಭಾರತ ಮತ್ತು ರಷ್ಯಾ ದೇಶಗಳು ಅತ್ಯುತ್ತಮ ಸಂಬಂಧ ಹೊಂದಿವೆ. ನಮ್ಮ ರಾಷ್ಟ್ರಗಳ ಮಧ್ಯೆ ಯಾವುದೇ ವಿಚಾರದಲ್ಲಿ, ಯಾವುದೇ ಸಮಸ್ಯೆಗಳೂ ಇಲ್ಲ ಎಂದೂ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ದೇಶಭಕ್ತ ಎಂದು ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಸ್ಕೋ ಮೂಲದ ಚಿಂತಕರ ಚಾವಡಿಯಂತಿರುವ ವಾಲ್ಡೈ ಕ್ಲಬ್ನಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಾನ್ ದೇಶಭಕ್ತರು. ಎಷ್ಟೇ ಅಡೆತಡೆಗಳು ಎದುರಾದರೂ, ಇತಿಮಿತಿ ಇದ್ದರೂ, ಅದನ್ನೆಲ್ಲ ಮೀರಿ ಸ್ವತಂತ್ರ ವಿದೇಶಾಂಗ ನೀತಿ ರೂಪಿಸುವಲ್ಲಿ ಅವರು ಸಮರ್ಥರಾಗಿದ್ದಾರೆ. ಭಾರತಕ್ಕೆ ಖಂಡಿತ ಒಳ್ಳೆಯ ಭವಿಷ್ಯ ಇದೆ. ಜಾಗತಿಕ ವ್ಯವಹಾರದಲ್ಲಿ ಅದರ ಪಾತ್ರ ಗಣನೀಯವಾಗಿ ಹೆಚ್ಚುತ್ತಿದೆ’ ಎಂದು ಹೇಳಿದರು.
‘ಭಾರತ ಬ್ರಿಟಿಷ್ ವಸಹತುಶಾಹಿಯಿಂದ ಸ್ವತಂತ್ರ, ಆಧುನಿಕತೆಯೆಡೆಗೆ ಅದ್ಭುತವಾಗಿ ಅಭಿವೃದ್ಧಿಯಾಗಿದೆ. ಆ ದೇಶ ಸ್ವಾತಂತ್ರ್ಯ ಪಡೆದ ಇತಿಹಾಸ ಸುದೀರ್ಘವಾದದ್ದು. ಭಾರತ ಮತ್ತು ರಷ್ಯಾ ನಡುವೆ ವಿಶೇಷ ಸೌಹಾರ್ದತೆ, ಒಪ್ಪಂದಗಳು ಇವೆ. ಪರಸ್ಪರ ಬೆಂಬಲಿಸುತ್ತಲೇ ಬಂದಿದ್ದೇವೆ. ಭವಿಷ್ಯದಲ್ಲೂ ಇದು ಮುಂದುವರಿಯುತ್ತದೆ ಎಂಬ ಖಾತ್ರಿ ನನಗೆ ಇದೆ’ ಎಂದು ಪುಟಿನ್ ಹೇಳಿದರು.
ಪುಟಿನ್ ಯಾವಾಗಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳುತ್ತಾರೆ. ಅವರು ನನ್ನ ಸ್ನೇಹಿತ ಎಂದೂ ಈಗಾಗಲೇ ಹೇಳಿದ್ದಾರೆ. ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳ ಅಧ್ಯಕ್ಷರು/ಪ್ರಧಾನಿಗಳೊಂದಿಗೂ ಅಸಮಾಧಾನವನ್ನೇ ಹೊಂದಿರುವ ಪುಟಿನ್, ಭಾರತ ಮತ್ತು ಪ್ರಧಾನಿ ಮೋದಿ ಬಗ್ಗೆ ವಿಶೇಷ ಅಭಿಮಾನ ಇರುವುದಾಗಿ ಆಗಾಗ ಹೇಳುತ್ತಲೇ ಇರುತ್ತಾರೆ. ಅದರಲ್ಲೂ ಉಕ್ರೇನ್-ರಷ್ಯಾ ಯುದ್ಧ ಶುರುವಾದಾಗಿನಿಂದಲೂ ಭಾರತ ತಟಸ್ಥ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿದೆ. ವಿಶ್ವದ ಎಲ್ಲ ರಾಷ್ಟ್ರಗಳೂ ರಷ್ಯಾ ವಿರುದ್ಧ ತಿರುಗಿಬಿದ್ದಿದ್ದರೂ ಭಾರತ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳೊಂದಿಗೆ ಸೌಹಾರ್ದಯುತವಾಗಿಯೇ ಇದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮತದಾನ ಮಾಡುವ ಸಂದರ್ಭ ಬಂದಾಗಲೆಲ್ಲ ತಟಸ್ಥ ನೀತಿ ಪಾಲನೆ ಮಾಡಿದೆ.
ಇದನ್ನೂ ಓದಿ: Nuclear Weapons | ಯಾವುದೇ ಕಾರಣಕ್ಕೂ ಅಣ್ವಸ್ತ್ರ ಬಳಕೆ ಕೂಡದು, ರಷ್ಯಾಗೆ ರಾಜನಾಥ್ ಸಿಂಗ್ ಆಗ್ರಹ