Site icon Vistara News

BJP Executive | ಬಿಜೆಪಿ ಕಾರ್ಯಕರ್ತರಿಗೆ ಸ್ನೇಹ ಯಾತ್ರೆ ನಡೆಸಲು ಕರೆ ನೀಡಿದ ಪ್ರಧಾನಿ ಮೋದಿ

pm modi

ಹೈದರಾಬಾದ್:‌ ಸಮಾಜದ ಎಲ್ಲ ವರ್ಗದವರೊಂದಿಗೆ ಬೆರೆಯಲು ʼಸ್ನೇಹ ಯಾತ್ರೆʼ ನಡೆಸುವಂತೆ ಬಿಜೆಪಿಯ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯದ್ದು ಪ್ರಜಾತಾಂತ್ರಿಕವಾದ ಚಿಂತನೆ, ಆಶಯಗಳಾಗಿವೆ. ಇದನ್ನು ಎಲ್ಲ ಕಾರ್ಯಕರ್ತರೂ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.

ತೆಲಂಗಾಣ, ಪಶ್ಚಿಮ ಬಂಗಾಳ, ಕೇರಳದಂತಹ ರಾಜ್ಯಗಳಲ್ಲಿ ಕೆಲವು ಪಕ್ಷಗಳು ಮತ್ತು ಸಿದ್ಧಾಂತವಾದಿಗಳು ನಡೆಸುತ್ತಿರುವ ಅಸಹಿಷ್ಣುತೆಯ ರಾಜಕೀಯವನ್ನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಘನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧರಾಗಿ ಎದುರಿಸುತ್ತಿದ್ದಾರೆ. ಅವರನ್ನು ನಾವು ಅಭಿನಂದಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಬಹಳಷ್ಟು ಪಕ್ಷಗಳು ಇಂದು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ಅವುಗಳು ಮಾಡಿರುವ ತಪ್ಪುಗಳಿಂದ ನಾವು ಪಾಠ ಕಲಿಯಬೇಕಾಗಿದೆ. ನಾವು ಆ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ ಪ್ರಧಾನಿ ಮೋದಿ ಪರಿವಾರ ರಾಜಕಾರಣವನ್ನು ತಮ್ಮ ಎಂದಿನ ದಾಟಿಯಲ್ಲಿಯೇ ಟೀಕಿಸಿದ್ದಾರೆ.

ಹೈದರಾಬಾದ್‌ ನಮ್ಮೆಲ್ಲರಿಗೂ ʼಭಾಗ್ಯನಗರʼವಾಗಿದೆ ಎಂದು ಪ್ರಧಾನಿ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹೈದರಾಬಾದ್‌ನ ಹೆಸರನ್ನು ಬದಲಾಯಿಸಬೇಕೆಂಬ ಬೇಡಿಕೆಯನ್ನು ಅವರು ಈ ರೀತಿ ಪರೋಕ್ಷವಾಗಿ ಇಲ್ಲಿ ಪ್ರಸ್ತಾಪಿಸಿದ್ದಾರೆ.

ಬಿಜೆಪಿ ತುಷ್ಟೀಕರಣ ರಾಜಕಾರಣವನ್ನು ಬದಿಗೊತ್ತಿ, ತೃಪ್ತಿಕರಣದ ರಾಜಕಾರಣ ಮಾಡಬೇಕಾಗಿದೆ ಎಂದಿರುವ ಮೋದಿ ʼಸಬ್‌ ಕಾ ವಿಕಾಸ್‌ʼ ಮಂತ್ರವನ್ನು ಪುನರುಚ್ಛರಿಸಿದ್ದು, ಕೊರೊನಾ ಕಾಲದಲ್ಲಿ ನಾವಿದನ್ನು ಮಾಡಿ ತೋರಿಸಿದ್ದೇವೆ ಎಂದು ವಿವರಿಸಿದ್ದಾರೆ.

ಪ್ರಧಾನಿ ಮೋದಿ ಇಂದು ಸಂಜೆ ಕಾರ್ಯಕಾರಣಿಯ ಭಾಗವಾಗಿ ಸಿಕಂದರಾಬಾದ್‌ನಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ | BJP Executive | ದೇಶ ಬಲಿಷ್ಠವಾಗಲು ಬಿಜೆಪಿ ಇನ್ನೂ 30 ವರ್ಷ ಅಧಿಕಾರದಲ್ಲಿರಬೇಕೆಂದ ಅಮಿತ್‌ ಶಾ

Exit mobile version