ನವ ದೆಹಲಿ: ರೈತರು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ( Mann Ki Baat 2022) ಸಲಹೆ ನೀಡಿದ್ದಾರೆ.
“ಸಿರಿಧಾನ್ಯಗಳ ಮಹತ್ವ ಮತ್ತು ಬೇಡಿಕೆ ದಿನೇದಿನೆ ವೃದ್ಧಿಸುತ್ತಿದೆ. ನಮ್ಮ ರೈತರು ಎಲ್ಲ ವಿಧದ ಸಿರಿಧಾನ್ಯಗಳನ್ನು ಬೆಳೆದು ಆದಾಯ ಗಳಿಸಬಹುದು. ಸಿರಿಧಾನ್ಯಗಳು ಪ್ರೊಟೀನ್ ಮತ್ತು ಫೈಬರ್‌ನ ಅಂಶಗಳಿಂದ ಆರೋಗ್ಯಪೂರ್ಣವಾಗಿದೆ. ಸೂಪರ್ ಫುಡ್ ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಕೆಲವರು ಸಿರಿಧಾನ್ಯಗಳನ್ನು ಬಳಸಿ ತಯಾರಿಸುವ ವಿಶೇಷ ಖಾದ್ಯಗಳನ್ನು, ಉಪಾಹಾರದ ತಿಂಡಿಗಳನ್ನು ಸಿದ್ಧಪಡಿಸುತ್ತಾರೆ. ಇವುಗಳ ಬೆಳೆಯನ್ನು ಹೆಚ್ಚಿಸುವ ಬಗ್ಗೆ ಸಂಶೋಧನೆಗಳೂ ನಡೆಯುತ್ತಿವೆʼʼ ಎಂದು ಮೋದಿ ವಿವರಿಸಿದರು.
ಕಳೆದ ೨೦೨೩ರ ವರ್ಷವನ್ನು ಅಂತಾರಾಷ್ಟ್ರೀಯಸಿರಿಧಾನ್ಯಗಳ ವರ್ಷ ಎಂದು ಆಚರಿಸಲಾಗಿತ್ತು. ಸಿರಿಧಾನ್ಯಗಳಿಂದ ಹಲವು ಪ್ರಯೋಜನಗಳು ಇವೆ. ಇದು ಸ್ಥೂಲಕಾಯದ ಸಮಸ್ಯೆ ಪರಿಹರಿಸಲು ಸಹಕಾರಿ. ಅಧಿಕ ರಕ್ತದೊತ್ತಡ, ಹೃದಯದ ಸಂಬಂಧಿತ ಕಾಯಿಲೆಗಳ ಉಪಶಮನಕ್ಕೂ ಸಿರಿಧಾನ್ಯಗಳ ಸೇವನೆ ಸಹಕಾರಿ. ಸಿರಿಧಾನ್ಯಗಳನ್ನು ಬೆಳೆಯಲು ಕಡಿಮೆ ನೀರು ಸಾಕು. ಜಠರ ಮತ್ತು ಕರುಳಿನ ಆರೋಗ್ಯಕ್ಕೂ ಹಿತಕಾರಿಯಾಗಿದೆ. ಜನತೆ ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎಂದರು.
ಪೌಷ್ಟಿಕಾಹಾರ ಮಾಸ
ಮುಂದಿನ ಸೆಪ್ಟೆಂಬರ್‌ನಲ್ಲಿ ಹಬ್ಬಗಳ ಸಾಲು ಬರುತ್ತಿವೆ. ಜತೆಗೆ ಪೌಷ್ಟಿಕಾಹಾರ ಸೇವನೆಯ ಮಹತ್ವವನ್ನು ಪ್ರಚುರಪಡಿಸಲು ಈ ತಿಂಗಳನ್ನು ಪೌಷ್ಟಿಕಾಹಾರ ಮಾಸವನ್ನಾಗಿ (ಸೆಪ್ಟೆಂಬರ್ ೧-೩೦) ಆಚರಿಸಲಾಗುವುದು. ಇಂದು ದೇಶಾದ್ಯಂತ ಅಪೌಷ್ಟಿಕತೆಯನ್ನು ದೂರವಿಡಲು ವಿಶೇಷ ಪ್ರಯತ್ನಗಳು ನಡೆಯುತ್ತವೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಸಾರ್ವಜನಿಕರ ಸಹಯೋಗ ಮುಖ್ಯ ಎಂದರು. ಅಂಗನವಾಡಿ ಸೇವೆಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಲು ಪೋಷಣ್ ಟ್ರ್ಯಾಕರ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎಂದು ಮೋದಿ ಹೇಳಿದರು.
ಡಿಜಿಟಲ್ ಇಂಡಿಯಾ: ಅರುಣಾಚಲ ಪ್ರದೇಶದ ಜೋರ್ಸಿಂಗ್ ಗ್ರಾಮಕ್ಕೆ ಆಗಸ್ಟ್ ೧೫ರಂದು ೪ಜಿ ಸೇವೆ ಲಭಿಸಿತು. ಅದೊಂದು ಕಾಲವಿತ್ತು. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಬಂದರೆ ಸಾಕು, ಇಡೀ ಗ್ರಾಮಸ್ಥರು ಆನಂದಿಸುತ್ತಿದ್ದರು. ಆದರೆ ಈಗ ೪ಜಿ ಸಂಪರ್ಕವನ್ನೂ ಗ್ರಾಮಸ್ಥರು ಅದೇ ಖುಷಿಯಲ್ಲಿ ಸ್ವಾಗತಿಸುತ್ತಿದ್ದಾರೆ. ಡಿಜಿಟಲ್ ಇಂಡಿಯಾ ಅಭಿಯಾನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ನುಡಿದರು.
ಅತ್ತಿ ಹಣ್ಣು ಸೇವಿಸಿ: ಮನ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿಯವರು ಅತ್ತಿ ಹಣ್ಣನ್ನು ಉಲ್ಲೇಖಿಸಿದರು. ಹಿಮಾಲಯನ್ ಫಿಗ್, ಅಕಾ ಬೇಡು ಇತ್ಯಾದಿ ಹೆಸರುಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಹೇರಳ ವಿಟಮಿನ್ ಮತ್ತು ಖನಿಜಾಂಶಗಳಿದ್ದು, ಜನತೆ ಬಳಸಬೇಕು ಎಂದರು. ಈ ಹಣ್ಣನ್ನು ಆನ್‌ಲೈನ್ ಮೂಲಕವೂ ಮಾರಾಟ ಮಾಡಲಾಗುತ್ತಿದೆ ಎಂದರು.
ಹಬ್ಬಗಳಿಗೂ ಕೃಷಿಗೂ ಅವಿನಾಭಾವ ನಂಟು
ಗಣೇಶ ಚತುರ್ಥಿ, ಓಣಂ, ನುವಾಖಾಯ್, ಸಂವತ್ಸರಿ ಪರ್ವ ಮೊದಲಾದ ಹಬ್ಬಗಳ ಸಾಲಿನ ಬಗ್ಗೆ ಪ್ರಸ್ತಾಪಿಸಿದ ಮೋದಿಯವರು, ನಮ್ಮ ಎಲ್ಲ ಹಬ್ಬಗಳಿಗೂ ಕೃಷಿ ಪದ್ಧತಿಗೂ ನಿಕಟ ನಂಟು ಇದೆ. ಇದು ನಮ್ಮ ದೇಶದ ಸಂಸ್ಕೃತಿಯನ್ನೂ ಬಿಂಬಿಸುತ್ತದೆ. ಆಗಸ್ಟ್ ೨೯ರಂದು ಮೇಜರ್ ಧ್ಯಾನ್ ಚಂದ್ ಜಯಂತಿ ನಡೆಯಲಿದೆ. ಹಾಗೂ ಅಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುತ್ತಿರುವುದು ಪ್ರಶಂಸನೀಯ ಎಂದರು.
ಜಲ ಸಂರಕ್ಷಣೆಯ ಮಹತ್ವ
ಸಾವಿರಾರು ವರ್ಷಗಳ ಹಿಂದೆ ಋಗ್ವೇದದಲ್ಲಿ ಜಲ ಸಂರಕ್ಷಣೆಯ ಮಹತ್ವವನ್ನು ಸಾರಲಾಗಿದೆ. ಋಗ್ವೇದದಲ್ಲಿ ಒಂದು ಶ್ಲೋಕವಿದೆ. ಅದು ಹೀಗಿದೆ- ಓಮಾನ್-ಮಾಪೊ ಮಾನುಷಿ: ಅಮೃತಮ್ ಧಾತ್ ತೋಕಾಯ ತನಯಾಯಶಂ ಯೋ| ಯೂಯಂ ಹಿಷ್ಠಾ ಭಿಷಜೊ ಮಾತೃತಮಾ ವಿಶ್ವಸ್ಥ ಸ್ಥಾತು: ಜಗತೊ ಜನಿತ್ರಿಃ | ಅಂದರೆ ಓ ಜಲವೇ, ನೀವು ಮಾನವನ ಮಿತ್ರ, ಜೀವದಾಯಿ, ನೀರಿನಿಂದ ಬೆಳೆ ಬೆಳೆದು ಅನ್ನವನ್ನು ಪಡೆಯುತ್ತೇವೆ. ಅದು ಪೀಳಿಗೆಯಿಂದ ಪೀಳಿಗೆಗೆ ಭದ್ರತೆ ನೀಡುತ್ತದೆ. ಎಲ್ಲಕ್ಕಿಂತ ಉತ್ತಮ ಔಷಧವೂ ಹೌದು. ನೀರು ಬ್ರಹ್ಮಾಂಡವನ್ನು ಪಾಲನೆ ಮಾಡುತ್ತದೆ. ಮನ್ ಕಿ ಬಾತ್‌ನಲ್ಲಿ ೪ ತಿಂಗಳಿನ ಮೊದಲು ಅಮೃತ್ ಸರೋವರ ಯೋಜನೆ ಬಗ್ಗೆ ಮಾತನಾಡಿದ್ದೆ. ಈಗ ಅದು ಜನಾಂದೋಲನವಾಗಿದೆ ಎಂದ ಪ್ರಧಾನಿ ಮೋದಿ, ಕರ್ನಾಟಕದ ಬಾಗಲಕೋಟದ ಬಿಳೆಕೆರೂರ್ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಮೃತ್ ಸರೋವರ ಯೋಜನೆ ಜಾರಿಯಾಗಿ ಜನರಿಗೆ ಪ್ರಯೋಜನವಾಗಿರುವುದನ್ನು ಸ್ಮರಿಸಿದರು. ಯುವಜನತೆ ಈ ಅಭಿಯಾನದಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಕೋಲಾರದ ಬೃಹತ್ ರಾಷ್ಟ್ರಧ್ವಜ: ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ ಬೃಹತ್ ರಾಷ್ಟ್ರಧ್ವಜ ಪ್ರಧಾನಿ ಮೋದಿಯವರ ಗಮನ ಸೆಳೆದಿದೆ. ಲಿಮ್ಕಾ ದಾಖಲೆ ಬರೆದ ಈ ಬೃಹತ್ ರಾಷ್ಟ್ರಧ್ವಜದ ಪ್ರದರ್ಶನವನ್ನು ಉಲ್ಲೇಖಿಸಿದ್ದಾರೆ. 202 ಮೀ. ಅಗಲ ಹಾಗೂ 630 ಮೀ. ಉದ್ದದ ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯೋತ್ಸವದಂದು ಹಾರಿಸಲಾಗಿತ್ತು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿಯನ್ನು ಮಾಡಲಾಗಿತ್ತು.
ಇದನ್ನೂ ಓದಿ : Mann ki Baat 2022 | ಅಮೃತ ಸರೋವರ ಯೋಜನೆಗೆ ಬಾಗಲಕೋಟೆಯ ಬಿಳೆಕೆರೂರ್ ಗ್ರಾಮಸ್ಥರ ಸಾಥ್, ಮೋದಿ ಶ್ಲಾಘನೆ