ಸೂರತ್: ಡಿಸೆಂಬರ್ 1ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಮೊದಲ ಹಂತದ ಚುನಾವಣೆಗೆ (Gujarat Election) ಭರ್ಜರಿ ಪ್ರಚಾರ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರು ಚುನಾವಣಾ ರ‍್ಯಾಲಿ, ಸಾರ್ವಜನಿಕ ಪ್ರಚಾರ ಸಭೆಗಳ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಸೂರತ್ ಜಿಲ್ಲೆಯ ಮಹುವಾದಲ್ಲಿ ಆಯೋಜಿಸಲಾಗಿದ್ದು, ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದರು. ಇದೇ ವೇಳೆ, ಮಹಾತ್ಮ ಗಾಂಧಿ ಅವರ ದಂಡಿ ಸತ್ಯಾಗ್ರಹವನ್ನು ನೆಪಿಸಿಕೊಂಡ ರಾಹುಲ್, ತಾವು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಗುಜರಾತ್‌ನ ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಥಳುಕು ಹಾಕಿಕೊಂಡಿದೆ ಎಂದು ಹೇಳಿದರು.
ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಸುರೇಂದ್ರನಗರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ನರ್ಮದಾ ಬಚಾವ್ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಪಾಲ್ಗೊಂಡಿದ್ದನ್ನು ಪ್ರಶ್ನಿಸಿದರು. ಅಲ್ಲದೇ, ಈ ಕೃತ್ಯಕ್ಕಾಗಿ ಕಾಂಗ್ರೆಸ್ ಸೋಲಿಸುವ ಮೂಲಕ ಮತದಾರರು ಶಿಕ್ಷೆ ನೀಡಬೇಕೆಂದು ಹೇಳಿದರು. ಅಧಿಕಾರವಂಚಿತರಾಗಿರುವರು ಮತ್ತು ಅಧಿಕಾರಕ್ಕಾಗಿ ಯಾತ್ರೆಯನ್ನು ನಡೆಸುತ್ತಿದ್ದಾರೆಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ ವಿಧಾನಸಭೆಗೆ ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 1ರಂದು ಮೊದಲನೆಯ ಹಂತದ ಚುನಾವಣೆ ನಡೆದರೆ, ಎರಡನೇ ಹಂತಕ್ಕೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಹಿಮಾಚಲ ಪ್ರದೇಶ ವಿಧಾನಸಭೆ ಫಲಿತಾಂಶದ ಜತೆಗೆ ಗುಜರಾತ್ ಎಲೆಕ್ಷನ್ ರಿಸಲ್ಟ್ ಕೂಡ ಪ್ರಕಟವಾಗಲಿದೆ.
ಇದನ್ನೂ ಓದಿ | ವಿಸ್ತಾರ Explainer | ಬುಡಕಟ್ಟು ಮತದಾರರನ್ನು ಸೆಳೆಯಲು ಬಿಜೆಪಿ ಹಾಕಿದ ಪಟ್ಟು ಯಾವುದು?