ಪ್ರಧಾನಿ ಮೋದಿ ಅವರು 73ನೇ ವಸಂತಕ್ಕೆ (PM Modi Birthday) ಕಾಲಿಟ್ಟಿದ್ದಾರೆ. ಈಗಿನ ಕಾಲದಲ್ಲಿ 20-25ರ ವಯಸ್ಸಿನವರೇ ಸೊಂಟ ನೋವು, ಕಾಲು ನೋವು ಎನ್ನುತ್ತ ಗೊಣಗುತ್ತಿರುತ್ತಾರೆ. ಅದೇ ಕಾರಣಕ್ಕೆ ಕಾಲೇಜಿಗೆ, ಕೆಲಸಕ್ಕೆ ಚಕ್ಕರ್ ಅನ್ನೂ ಹಾಕುತ್ತಾರೆ. ಆದರೆ ಮೋದಿ ಹಾಗಲ್ಲ. 73 ವರ್ಷ ವಯಸ್ಸಾದರೂ ಇಂದಿಗೂ ಅವರು ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಪ್ರಧಾನಿಯಾಗಿ ಕಟ್ಟುನಿಟ್ಟಿನಿಂದ ದಿನದ 14 ತಾಸು ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಅವರು ಇಷ್ಟು ಲವಲವಿಕೆಯಿಂದ ಇರುವುದರ ಹಿಂದಿನ ಗುಟ್ಟೇನು ಎನ್ನುವುದು ಅನೇಕರ ಪ್ರಶ್ನೆ. ಅದಕ್ಕಾಗಿಯೇ ನಾವಿಲ್ಲಿ ಮೋದಿ ಅವರ ಹೆಲ್ತ್ ಸೀಕ್ರೇಟ್‌ಗಳನ್ನು ಕೊಟ್ಟಿದ್ದೇವೆ ನೋಡಿ.
ನಿತ್ಯ ಯೋಗಾಸನ
ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೋಗವೆಂದರೆ ಅಚ್ಚುಮೆಚ್ಚು. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ, ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡುವಂತೆ ಮಾಡಿದವರು ಅವರು. ಹಾಗೆಯೇ ಅವರೂ ಕೂಡ ಪ್ರತಿನಿತ್ಯ ಯೋಗವನ್ನು ಮಾಡುತ್ತಾರೆ. ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿ ಹಲವಾರು ರೀತಿಯ ಯೋಗವನ್ನು ಅವರು ಮಾಡುತ್ತಾರೆ. ಈ ಹಿಂದೆ ಅವರು ತಮ್ಮ ಯೋಗದ ಅಭ್ಯಾಸದ ಬಗ್ಗೆ ಹಲವು ಮಾಧ್ಯಮಗಳಿಗೆ ಸಂದರ್ಶನದಲ್ಲಿ ಮಾಹಿತಿ ನೀಡಿದ್ದರು ಕೂಡ.
ಆಹಾರದಿಂದ ಆರೋಗ್ಯ
ದೇಶಕ್ಕೇ ಪ್ರಧಾನಿ ಆಗಿರುವ ಮೋದಿ ಅವರಿಗೆ ದಿನನಿತ್ಯ ಯಾವ ಆಹಾರವನ್ನು ಬೇಕಾದರೂ ಸೇವಿಸುವ ಅವಕಾಶವಿದೆ. ಆದರೆ ಅವರು ಶುದ್ಧ ಸಸ್ಯಹಾರಿ. ಹಾಗೆಯೇ ಆಹಾರದ ವಿಚಾರದಲ್ಲಿ ತುಂಬಾ ಸೂಕ್ಷ್ಮತೆಯನ್ನು ಮೋದಿ ಅವರು ಹೊಂದಿದ್ದಾರೆ. ಪ್ರತಿದಿನ ಬೆಳಿಗ್ಗೆ ತಿಂಡಿಯಾದ ನಂತರ ಶುಂಠಿ ಟೀ ಕುಡಿಯುವ ಅಭ್ಯಾಸ ಅವರಿಗಿದೆ. ಹಾಗೆಯೇ ಖಿಚಡಿ, ದಕ್ಷಿಣ ಭಾರತದ ಕೆಲವು ತಿಂಡಿಗಳು ಮತ್ತು ಗುಜರಾತ್‌ನ ಕೆಲವು ತಿಂಡಿಗಳನ್ನು ಅವರು ಸೇವಿಸುತ್ತಾರಂತೆ. ಹಣ್ಣುಗಳು ಮತ್ತು ತರಕಾರಿಯನ್ನು ಅವರು ಹೆಚ್ಚಾಗಿ ಸೇವನೆ ಮಾಡುವುದಾಗಿ ಈ ಹಿಂದೆಯೇ ಹೇಳಿಕೊಂಡಿದ್ದರು.
ಇದನ್ನೂ ಓದಿ: PM Modi Birthday | ಗುಜರಾತ್‌ನಿಂದ ದಿಲ್ಲಿಯ ತನಕ, ಪ್ರಧಾನ ಸೇವಕರ ಜೈತ್ರಯಾತ್ರೆ, ಅಮೋಘ ಚರಿತ್ರೆ
ಉಪವಾಸ
ಆಹಾರದ ವಿಚಾರದಲ್ಲಿ ಮೋದಿ ಅವರು ಎಷ್ಟು ಸೂಕ್ಷ್ಮವೋ, ಉಪವಾಸದ ವಿಚಾರದಲ್ಲೂ ಅವರು ಅಷ್ಟೇ ಸೂಕ್ಷ್ಮವಾಗಿದ್ದಾರೆ. ಮೋದಿ ಅವರು ಪ್ರತಿ ವರ್ಷ ನವರಾತ್ರಿ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಸುಮಾರು 35 ವರ್ಷಕ್ಕೂ ಹೆಚ್ಚು ಸಮಯದಿಂದ ಅವರು ಈ ರೀತಿ ಉಪವಾಸ ಕೈಗೊಳ್ಳುತ್ತಿದ್ದಾರೆ. 2014ರ ನವರಾತ್ರಿ ಸಮಯದಲ್ಲಿ ಮೋದಿ ಅವರು ಅಮೆರಿಕಕ್ಕೆ ಪ್ರವಾಸ ಕೈಗೊಂಡಿದ್ದರು. ವಿದೇಶಕ್ಕೆ ಹೋಗಿಬಂದರಾದರೂ ಅವರು ನವರಾತ್ರಿಯ ಉಪವಾಸವನ್ನು ಕೈಬಿಟ್ಟಿರಲಿಲ್ಲ.
ಮನೆಮದ್ದು, ರೋಗಗಳಿಗೆ ಗುದ್ದು
ಈಗೆಲ್ಲ ಮನುಷ್ಯನಿಗೆ ಸಣ್ಣ ಪುಟ್ಟ ಕಾಯಿಲೆ ಬಂದರೂ ತಕ್ಷಣ ಆಸ್ಪತ್ರೆಗೆ ಓಡುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ಹಿಂದೆ ಹಾಗಿರಲಿಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆಯಲ್ಲೇ ಮದ್ದು ಮಾಡಿಕೊಂಡು ಜೀವನ ಸಾಗಿಸಿದ್ದರು ನಮ್ಮ ಪೂರ್ವಜರು. ಮೋದಿ ಅವರು ಕೂಡ ಅದೇ ಮಂತ್ರವನ್ನು ಪರಿಪಾಲಿಸುತ್ತಿದ್ದಾರೆ. ಶೀತ, ಕೆಮ್ಮಿನಂತಹ ಸಣ್ಣ ಪುಟ್ಟ ಕಾಯಿಲೆಗೆ ಅವರು ಮನೆಯಲ್ಲೇ ಮದ್ದು ಮಾಡಿಕೊಳ್ಳುತ್ತಾರಂತೆ. ಶೀತವಾದರೆ ಬಿಸಿ ನೀರು ಕುಡಿಯುವುದು, ಹಬೆ ತೆಗೆದುಕೊಳ್ಳುವುದು, ಹಾಗೆಯೇ ಮನೆ ಮದ್ದು ಸೇವಿಸುವುದನ್ನು ಮಾಡುತ್ತಾರಂತೆ.
ಇದನ್ನೂ ಓದಿ: PM Modi Birthday: ದಿರಸಿನಿಂದಲೇ ಮೋಡಿ ಮಾಡುತ್ತಾರೆ ಮೋದಿ… ಇಲ್ಲಿವೆ ಅವರ ಸ್ಪೆಷಲ್ ಲುಕ್‌ಗಳು
ನಿದ್ರೆ ಆರೋಗ್ಯದ ಮುದ್ರೆ
ಈಗಿನ ಯುವಕರಿಗೆ ರಾತ್ರಿ ತಡವಾಗಿ ಮಲಗಿ, ಸೂರ್ಯ ನೆತ್ತಿಗೆ ಬರುವ ತನಕ ಮಲಗಿಕೊಂಡೇ ಇರುವುದು ಅಭ್ಯಾಸವಾಗಿದೆ. ಆದರೆ ಮೋದಿ ಅವರು ಹಾಗಲ್ಲ. ಅವರು ಪ್ರತಿನಿತ್ಯ ಮುಂಜಾನೆ ಐದು ಗಂಟೆಗೆ ಎದ್ದುಬಿಡುತ್ತಾರೆ. ಎದ್ದ ನಂತರ ಸುಮಾರು 45 ನಿಮಿಷ ಕಾಲ ಯೋಗ ಮಾಡುತ್ತಾರೆ. ಅವರಿಗೆ ದಿನವೂ ಮೂರು ಗಂಟೆ ನಿದ್ರೆ ಮಾಡಿ ಅಭ್ಯಾಸವಾಗಿದೆಯಂತೆ. ಅದಕ್ಕಿಂತ ಹೆಚ್ಚು ಹೊತ್ತು ನಿದ್ರೆ ಮಾಡುವುದಕ್ಕೆ ನನ್ನಿಂದ ಸಾಧ್ಯವೇ ಇಲ್ಲ ಎಂದು ಅವರು ಅಕ್ಷಯ್ ಕುಮಾರ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದರು.
ಬೆಳಗ್ಗಿನ ದಿನಚರಿ
ಬೆಳಗ್ಗೆ ಎದ್ದ ತಕ್ಷಣ ಯೋಗ ಮಾಡುವ ಮೋದಿ ಅವರು ಅದಾದ ನಂತರ ಒಂದಿಷ್ಟು ಸಮಯ ವಾಕಿಂಗ್ ಮಾಡುತ್ತಾರಂತೆ. ಪಂಚಭೂತಗಳಾದ ಅಗ್ನಿ, ಜಲ, ಭೂಮಿ, ಗಾಳಿ ಮತ್ತು ಆಕಾಶದ ಅಂಶಗಳನ್ನು ಹೊಂದಿರುವ ಟ್ರ್ಯಾಕ್ ಮೇಲೆ ಅವರು ವಾಕಿಂಗ್ ಮಾಡುತ್ತಾರಂತೆ. ಇದರಿಂದಾಗಿ ಅವರಿಗೆ ಜೀವನೋತ್ಸಾಹ ಹೆಚ್ಚಾಗುತ್ತದೆ ಎಂದು ಅವರೇ ಈ ಹಿಂದೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಆಯುರ್ವೇದ
ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿಸಿರುವ ಮೋದಿ ಅವರು ಯೋಗದ ನಂತರ ಆಯುರ್ವೇದದ ಬಗ್ಗೆಯೂ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಔಷಧದ ಅಗತ್ಯ ಬೀಳುವಂತಹ ಕಾಯಿಲೆಗೆ ಅವರು ಆಯುರ್ವೇದದ ಔಷಧವನ್ನೇ ಸ್ವೀಕರಿಸುತ್ತಾರಂತೆ. ಭಾರತದ ಯುವ ಜನತೆ ಆಯುರ್ವೇದದ ಬಗ್ಗೆ ಅರಿತುಕೊಂಡು, ಅದನ್ನು ಪ್ರಪಂಚಕ್ಕೆ ತಿಳಿಸಬೇಕು ಎಂದು ಈ ಹಿಂದೆ ಮೋದಿ ಅವರು ಯುವ ಜನತೆಗೆ ಸಂದೇಶ ನೀಡಿದ್ದರು.