ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್‌ನಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತಾರೂಢ ಎನ್‌ಡಿಎ ನಾಯಕರ ಮಧ್ಯೆ ತೀವ್ರ ವಾಗ್ವಾದ, ಗಲಾಟೆ ನಡೆಯುತ್ತಿದೆ. ಇನ್ನು, ಬುಧವಾರ (ಆಗಸ್ಟ್ 9) ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಅಮಿತ್ ಶಾ (Amit Shah), “ನರೇಂದ್ರ ಮೋದಿ ಅವರು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬೆಳಗ್ಗೆ 4 ಗಂಟೆಗೇ ಕರೆ ಮಾಡಿದ್ದರು. ಪ್ರತಿಯೊಂದು ಮಾಹಿತಿ ಪಡೆದು ನಾವಿಬ್ಬರು ಶಾಂತಿ ಸ್ಥಾಪನೆಗೆ ಅವಿರತವಾಗಿ ಶ್ರಮಿಸಿದೆವು” ಎಂದು ಕೇಂದ್ರ ಗೃಹ ಸಚಿವ ತಿಳಿಸಿದರು.
ಲೋಕಸಭೆಯಲ್ಲಿ ರಾಹುಲ್ ಗಾಂಧಿಗೆ ಪ್ರತ್ಯುತ್ತರ ನೀಡಿದ ಅಮಿತ್ ಶಾ, “ನಾನು ದೇಶದ ಜನರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ನರೇಂದ್ರ ಮೋದಿ ಅವರು ಅವತ್ತು ಬೆಳಗ್ಗೆ 4 ಗಂಟೆಗೆ ಕರೆ ಮಾಡಿದ್ದರು. ಮತ್ತೆ ಮರುದಿನ 6.30ಕ್ಕೆ ಕರೆ ಮಾಡಿ ನನ್ನನ್ನು ಎಬ್ಬಿಸಿದರು. ನಾವು ಮೂರು ದಿನ ಸತತವಾಗಿ ಮಣಿಪುರ ಹಿಂಸಾಚಾರ ನಿಯಂತ್ರಿಸಲು ಕೆಲಸ ಮಾಡಿದೆವು. ಶಾಂತಿಸ್ಥಾಪನೆಗೆ ಈಗಲೂ ಶ್ರಮಿಸುತ್ತಿದ್ದೇವೆ” ಎಂದು ತಿಳಿಸಿದರು.
ಅಮಿತ್ ಶಾ ಪ್ರತಿಕ್ರಿಯೆ
3 ದಿನದಲ್ಲಿ 16 ವಿಡಿಯೊ ಕಾನ್ಫರೆನ್ಸ್
“ಮಣಿಪುರ ಹಿಂಸಾಚಾರ ಭುಗಿಲೇಳುತ್ತಲೇ ನಾವು ಮೂರು ದಿನಗಳಲ್ಲಿ 16 ವಿಡಿಯೊ ಕಾನ್ಫರೆನ್ಸ್ ಮೂಲಕ ಹಲವು ಸೂಚನೆ, ಮಾಹಿತಿ ಸಂಗ್ರಹಣೆ ಮಾಡಿದೆವು. ಕೂಡಲೇ ವಾಯುಪಡೆ ವಿಮಾನಗಳ ಮೂಲಕ 36 ಸಾವಿರ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸದೆವು. ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಯನ್ನು ಬದಲಾಯಿಸಿದೆವು. ಸೂರತ್‌ನಿಂದ ಸಲಹೆಗಾರರೊಬ್ಬರನ್ನು ಕಳುಹಿಸಿದೆವು. ಮೇ 4ರಂದೇ ಇಷ್ಟೆಲ್ಲ ಕ್ರಮ ತೆಗೆದುಕೊಂಡೆವು” ಎಂದರು.
ಇದನ್ನೂ ಓದಿ: Rahul Gandhi: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಎಂದ ರಾಹುಲ್ ಗಾಂಧಿ; ಸಂಸತ್ತಲ್ಲಿ ಗದ್ದಲ, ಸ್ಮೃತಿ ಇರಾನಿ ತಿರುಗೇಟು
ರಾಹುಲ್ ಗಾಂಧಿ ಡ್ರಾಮಾ
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಮಣಿಪುರವಿಷಯದಲ್ಲಿ ರಾಹುಲ್ ಗಾಂಧಿ ಡ್ರಾಮಾ ಮಾಡುತ್ತಿದ್ದಾರೆ ಎಂದು ದೂರಿದರು. “ಮಣಿಪುರದ ಕುರಿತು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು. ಅವರು (ಕಾಂಗ್ರೆಸ್) ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಏನು ಮಾಡಿಲ್ಲ. ನಾವು ಈ ರಾಜ್ಯಗಳ ಅಭಿವೃದ್ಧಿಯನ್ನು ಕೈಗೊಳ್ಳುತ್ತಿದ್ದೇವೆ. 10 ವರ್ಷಗಳ ಯುಪಿಎ ಅವಧಿಯಲ್ಲಿ ಏನನ್ನೂ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಕೇವಲ ಒಳಜಗಳವನ್ನು ಪ್ರೇರೇಪಿಸುತ್ತಿದೆ” ಎಂದು ಟೀಕಿಸಿದರು. ಇನ್ನು ಮಣಿಪುರ ಹಿಂಸಾಚಾರದ ಕುರಿತು ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಮಾತನಾಡಲಿದ್ದಾರೆ.