ರಷ್ಯಾ-ಉಕ್ರೇನ್ ಯುದ್ಧಕ್ಕೆ ಒಂದು ವರ್ಷ ಆಗುತ್ತ ಬಂತು. ಕಳೆದ ಫೆಬ್ರವರಿಯಿಂದ ಶುರುವಾದ ಈ ಯುದ್ಧ ಅಂತ್ಯವನ್ನೇ ಕಾಣುತ್ತಿಲ್ಲ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ, ಜಾಗತಿಕ ನಾಯಕರೆಲ್ಲ, ಅವರದ್ದೇ ಧಾಟಿಯಲ್ಲಿ ರಷ್ಯಾಕ್ಕೆ ಬುದ್ಧಿಮಾತು ಹೇಳಿಯಾಯ್ತು. ಉಕ್ರೇನ್ ಮೇಲೆ ಸಾರಿರುವ ಯುದ್ಧ ನಿಲ್ಲಿಸಿ ಎಂದು ಹೇಳಿದ್ದೇ ಬಂತು. ಆದರೆ ರಷ್ಯಾ ಯಾರ ಮಾತೂ ಕೇಳುತ್ತಿಲ್ಲ. ಪ್ರಾರಂಭದಲ್ಲಿ ಶಾಂತಿ ಮಾತುಕತೆಗೆ ಆಸಕ್ತಿ ತೋರಿಸುತ್ತಿದ್ದ ಉಕ್ರೇನ್ ಕೂಡ ಈಗೀಗ ಅದನ್ನು ನಿರಾಕರಿಸುತ್ತಿದೆ. ಆದರೂ ರಷ್ಯಾ-ಉಕ್ರೇನ್ ನಡುವೆ ಶಾಂತಿಮಾತುಕತೆ ಸಾಧ್ಯವಾಗಿಸುವ ತಾಕತ್ತು ಯಾರಿಗಾದರೂ ಇದ್ದರೆ, ಅದು ಪ್ರಧಾನಿ ನರೇಂದ್ರ ಮೋದಿಯವರಿಗೇ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಅಮೆರಿಕ ಕೂಡ ಇದೇ ಅರ್ಥದಲ್ಲಿಯೇ ಹಲವು ಬಾರಿ ಮಾತನಾಡಿದ್ದನ್ನು ನಾವು ಕೇಳಿದ್ದೇವೆ.
ಈಗ ಫ್ರೆಂಚ್ನ ಹಿರಿಯ ಪತ್ರಕರ್ತರೊಬ್ಬರು ಮತ್ತದೇ ಮಾತುಗಳನ್ನಾಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಾಯಕರ ನಡುವೆ ಮಾತುಕತೆ ಸಾಧ್ಯವಾಗಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಸಾಧ್ಯ ಎಂದು ಲಾರಾ ಹೈಮ್ ಎಂಬ ಫ್ರೆಂಚ್ ಪತ್ರಕರ್ತೆಯೊಬ್ಬರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
‘ರಷ್ಯಾ ಮತ್ತು ಉಕ್ರೇನ್ ನಾಯಕರ ಮಧ್ಯೆ ಶಾಂತಿ ಮಾತುಕತೆ ನಡೆಯುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಧ್ಯ. ಈ ಎರಡೂ ರಾಷ್ಟ್ರಗಳು ಸಂಧಾನ ಮಾಡಿಕೊಳ್ಳುವಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಲಾರಾ ಹೈಮ್ ಹೇಳಿದ್ದಾರೆ.
‘ರಷ್ಯಾ ಮತ್ತು ಉಕ್ರೇನ್ ನಡುವೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಎರಡೂ ರಾಷ್ಟ್ರಗಳ ನಾಯಕರೂ ಪರಸ್ಪರ ಮಾತನಾಡುವ ಆಸಕ್ತಿ ತೋರಿಸುತ್ತಿಲ್ಲ. ರಷ್ಯಾ ಅಧ್ಯಕ್ಷರು ಯುದ್ಧ ನಿಲ್ಲಿಸುವ ಸೊಲ್ಲೆತ್ತುತ್ತಿಲ್ಲ. ಉಕ್ರೇನ್ ಆಡಳಿತ ಕೂಡ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲೇ ಈ ವಿಷಯ ಪ್ರಸ್ತಾಪಿಸಲು ಆಸಕ್ತಿ ತೋರಿಸುತ್ತಿದೆ ಹೊರತು, ರಷ್ಯಾ ಜತೆ ಮುಖಾಮುಖಿ ಚರ್ಚೆಗೆ ಒಪ್ಪುತ್ತಿಲ್ಲ. ಒಟ್ಟಾರೆ ಪರಿಸ್ಥಿತಿ ಕಗ್ಗಂಟಾಗಿದೆ. ಹೀಗಿರುವಾಗ ಈ ಎರಡೂ ರಾಷ್ಟ್ರಗಳ ಮಧ್ಯೆ ರಾಜಿ ಸಂಧಾನಕ್ಕೆ ವ್ಯಕ್ತಿಯೊಬ್ಬರ ಅಗತ್ಯವಿದೆ ಮತ್ತು ಅದು ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಲಾರಾ ಹೈಮ್ ತಿಳಿಸಿದ್ದಾರೆ.
ಇದನ್ನೂ ಓದಿ: Russia Ukraine war | ತಿರುಗೇಟು ಕೊಟ್ಟ ಉಕ್ರೇನ್, ಒಂದೇ ದಿನ ರಷ್ಯಾದ 800 ಯೋಧರ ಹತ್ಯೆ ಎಂದು ಸೇನೆ ಘೋಷಣೆ