ಕೊಚ್ಚಿ, ಕೇರಳ: ದೇವರ ನಾಡು ಕೇರಳ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕೊಚ್ಚಿ ನಗರಕ್ಕೆ ಬಂದಿಳಿದರು. ಬಳಿಕ ಅವರು ಬೃಹತ್ ರೋಡ್ ಶೋ ನಡೆಸಿದರು. ಸುಮಾರು 1.8 ಕಿ.ಮೀ ರೋಡ್ ಶೋದಲ್ಲಿ ಭಾರೀ ಜನಸಾಗರ ನೆರೆದಿತ್ತು. ಥೇವರಾದ ಸೇಕ್ರೆಡ್ ಹಾರ್ಟ್ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿರುವ ಯುವಮ್ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಂಡರು(PM Modi in Kerala).
ನಮ್ಮ ದೇಶವು ಈಗ ಅಮೃತಕಾಲದಲ್ಲಿ ಪಯಣವನ್ನು ಆರಂಭಿಸಿದೆ. ಯುವಮ್ ಮೂಲಕ ಕೇರಳ ಯುವಕರು ಕೈಗೊಂಡಿರುವ ನಿರ್ಣಯವು ಮಹತ್ವದ್ದಾಗಿದೆ. ಅದರ ಹಿಂದೆ ರೋಮಾಂಚಕ ಯುವಕರ ಶಕ್ತಿ ಇದ್ದಾಗ ಒಂದು ಮಿಷನ್ ರೋಮಾಂಚಕವಾಗುತ್ತದೆ. ಕೇರಳಕ್ಕೆ ಬಂದಾಗ, ಅದು ಎಷ್ಟು ಭವ್ಯವಾಗಿದೆ ಮತ್ತು ಸುಂದರವಾಗಿದೆ ಎಂದರೆ ಇಲ್ಲಿಗೆ ಬರುವುದರಿಂದ ಶಕ್ತಿಯು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಕೇರಳದ ಕೊಚ್ಚಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಯುವಮ್ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಂಡ ಬಳಿಕ ಪಿಎಂ ಮೋದಿ ಅವರು ಕೇರಳದ ಅನೇಕ ಕ್ರಿಶ್ಚಿಯನ್ ಮಿಷನರಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಮಾತನಾಡಲಿದ್ದಾರೆ. ನೈಸರ್ಗಿಕ ರಬ್ಬರ್ ಬೆಲೆ ಹೆಚ್ಚಿಸುವ ನಿರ್ಣಯವನ್ನು ಸರ್ಕಾರ ಕೈಗೊಂಡರೆ ಮುಂಬರುವ ಲೋಕಸಭೆ ಎಲೆಕ್ಷನ್‌ನಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ಬಗ್ಗೆ ಕೆಲವು ಚರ್ಚ್‌ಗಳು ಘೋಷಣೆ ಮಾಡಿವೆ. ಹಾಗಾಗಿ, ಪ್ರಧಾನಿ ಮಿಷನರಿ ಮುಖ್ಯಸ್ಥರನ್ನು ಭೇಟಿಯಾಗುತ್ತಿರುವ ಮಹತ್ವ ಪಡೆದುಕೊಂಡಿದೆ.
ಮಂಗಳವಾರ ತಿರುವನಂತಪುರಂಕ್ಕೆ ತೆರಳಲಿರುವ ಮೋದಿ ಅವರು, ಕೇರಳದ ಮೊದಲ ವಂದೆ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ಸಂಚರಿಸಲಿದೆ. ಇದೇ ವೇಳೆ, ಕೊಚ್ಚಿ ವಾಟರ್ ಮೆಟ್ರೋ ರೈಲಿಗೂ ಚಾಲನೆ ನೀಡಲಿದ್ದಾರೆ. ದೇಶದ ಮೊದಲ ಡಿಜಿಟಲ್ ಸೈನ್ಸ್ ಪಾರ್ಕ್‌ಗೆ ತಿರುನಂತಪುರದಲ್ಲಿ ಶಿಲಾನ್ಯಾಸ ಮಾಡಲಿದ್ದಾರೆ.
ಯುವಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಕೊಚ್ಚಿಯಲ್ಲಿ ನಡೆದ ಬೃಹತ್ ರೋಡ್ ಶೋದಲ್ಲಿ ಸಾಕಷ್ಟು ಜನರು ಪಾಲ್ಗೊಂಡಿದ್ದರು. ರೋಡ್ ಶೋ ನಡೆದ ರಸ್ತೆಯ ಇಕ್ಕೆಲುಗಳಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಅಲ್ಲದೇ, ಪ್ರಧಾನಿ ಮೋದಿ ಅವರಿಗೆ ಪುಷ್ಪ ವೃಷ್ಟಿ ಮಾಡಿದರು. ಕೇರಳದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳಲು ಬಿಜೆಪಿಯ ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಅಲ್ಲಿನ ಜನರ ಬೇಡಿಕೆಗಳ ಬಗ್ಗೆ ಹೆಚ್ಚು ಕಾಳಜಿಯನ್ನು ತೋರಿಸಲಾಗುತ್ತಿ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.