ಪ್ರಧಾನಿ ನರೇಂದ್ರ ಮೋದಿ ಇಂದು (ಡಿ.4) ಗುಜರಾತ್ನ ಗಾಂಧಿನಗರಕ್ಕೆ ತೆರಳಿ, ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಡಿ.5ರಂದು ನಡೆಯಲಿದೆ. ಈ ಹಂತದಲ್ಲಿ ಪ್ರಧಾನಿ ಮೋದಿ, ಮತ್ತು ಅವರ ತಾಯಿ ಹೀರಾಬೆನ್ ಕೂಡ ಮತದಾನ ಮಾಡಲಿದ್ದಾರೆ. ಇಂದು ಅಹ್ಮದಾಬಾದ್ನಲ್ಲಿ ಲ್ಯಾಂಡ್ ಆದ ನರೇಂದ್ರ ಮೋದಿ, ಅಲ್ಲಿಂದ ಗಾಂಧಿನಗರಕ್ಕೆ ಹೋಗಿ ತಾಯಿಯನ್ನು ಭೇಟಿಯಾಗಿ-ಆಪ್ತ ಸಮಯವನ್ನು ಕಳೆದಿದ್ದಾರೆ.
ಶತಾಯುಷಿ ತಾಯಿಯ ಪಕ್ಕ ಸೋಫಾದಲ್ಲಿ ಕುಳಿತ ಪ್ರಧಾನಿ ಮೋದಿ ಟೀ ಸವಿಯುತ್ತ ಅಮ್ಮನೊಟ್ಟಿಗೆ ಮಾತನಾಡಿದ್ದಾರೆ. ಅಮ್ಮನ ಮಾತುಗಳನ್ನು ಆಲಿಸಿದ್ದಾರೆ. ನಂತರ ಅವರ ಪಾದ ಸ್ಪರ್ಶಿಸಿ ನಮಸ್ಕಾರ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಹೀರಾಬೆನ್ ಅವರು ತಮ್ಮ ಪುತ್ರನ ತಲೆಯನ್ನು ವಾತ್ಸಲ್ಯದಿಂದ ಹಿಡಿದು, ಆಶೀರ್ವದಿಸಿದ್ದನ್ನು ಕಾಣಬಹುದು. ಇವರಿಬ್ಬರು ಕುಳಿತ ಸೋಫಾ ಹಿಂದೆ, ಗೋಡೆಯ ಮೇಲೆ ಹೀರಾಬೆನ್ ಅವರು ಮೋದಿಯವರಿಗೆ ತುತ್ತು ತಿನ್ನಿಸುತ್ತಿರುವ ಫೋಟೋವನ್ನು ನೋಡಬಹುದು. ಪ್ರಧಾನಿ ನರೇಂದ್ರ ಮೋದಿ ಇದೇ ವರ್ಷ ಜೂನ್ನಲ್ಲಿ ತಮ್ಮ ತಾಯಿಯ 100ನೇ ವರ್ಷದ ಜನ್ಮದಿನದಂದು ಹೋಗಿ ಭೇಟಿ ಮಾಡಿ, ಅವರ ಪಾದ ತೊಳೆದು ಪೂಜೆ ಮಾಡಿದ್ದರು. ಅದಾದ ಮೇಲೆ ಅಮ್ಮನಿದ್ದಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ.
ಗುಜರಾತ್ ವಿಧಾನಸಭೆಯ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 2017ರ ಚುನಾವಣೆಯಲ್ಲಿ ಈ 93 ಕ್ಷೇತ್ರಗಳಲ್ಲಿ 51 ಸೀಟ್ಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಾಂಗ್ರೆಸ್ 39 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಈ ಸಲವೂ ಗೆಲ್ಲುವ ಭರವಸೆಯನ್ನು ಇಟ್ಟುಕೊಂಡಿದೆ. ಅಂದಹಾಗೇ, ಪ್ರಧಾನಿ ನರೇಂದ್ರ ಮೋದಿ ಡಿ.5ರಂದು ಬೆಳಗ್ಗೆ 8.30ರ ಹೊತ್ತಿಗೆ ಅಹ್ಮದಾಬಾದ್ನಲ್ಲಿ ಮತಚಲಾಯಿಸಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Har Ghar Tiranga | ರಾಷ್ಟ್ರಧ್ವಜಗಳನ್ನು ಮಕ್ಕಳಿಗೆ ಹಂಚಿ, ಸಂಭ್ರಮಿಸಿದ ಪ್ರಧಾನಿ ಮೋದಿ ತಾಯಿ