Site icon Vistara News

ಕಾಳಿ ಮಾತೆಯ ಆಶೀರ್ವಾದ ಭಾರತದ ಮೇಲಿದೆ: ಮಹುವಾ, ಮಮತಾಗೆ ಟಾಂಗ್‌ ಕೊಟ್ಟ ಮೋದಿ

PM Modi Visit Karnataka

ಕೋಲ್ಕತ್ತಾ: ಕಾಳಿ ಮಾತೆಯ ಆಶೀರ್ವಾದ ಸದಾ ಭಾರತದ ಮೇಲಿದೆ ಎಂದು ಪ್ರಧಾನ ಮಂತ್ರ ನರೇಂದ್ರ ಮೋದಿ ಹೇಳಿದ್ದಾರೆ. ಕಾಳಿಯ ಪೋಸ್ಟರ್‌ ವಿವಾದ, ಕಾಳಿ ದೇವಿಯ ಬಗ್ಗೆ ತೃಣಮೂಲ ಸಂಸದೆ ಮಹುವಾ ಮೋಯಿತ್ರಾ ಅವರ ಹೇಳಿಕೆಗಳ ವಿವಾದದ ಹಿನ್ನೆಲೆಯಲ್ಲಿ ಅವರ ಈ ಮಾತು ಮಹತ್ವ ಪಡೆದುಕೊಂಡಿದೆ.

ಶ್ರೀ ರಾಮಕೃಷ್ಣ ಮಠದ 15ನೇ ಅಧ್ಯಕ್ಷರಾಗಿದ್ದ ಸ್ವಾಮಿ ಆತ್ಮಸ್ಥಾನಂದ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹೀಗೆ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿಕೊಂಡರು. ʻ‘ಸ್ವಾಮಿ ರಾಮಕೃಷ್ಣ ಪರಮಹಂಸರು ತಮ್ಮ ಕಣ್ಣೆದುರು ಮಾತೆ ಕಾಳಿಯನ್ನು ಕಂಡ ಸಂತ. ಸ್ವಾಮಿ ವಿವೇಕಾನಂದರು ಭವ್ಯವಾದ ಎತ್ತರ ವ್ಯಕ್ತಿತ್ವ ಹೊಂದಿದ್ದರೂ ಅವರು ಕಾಳಿ ದೇವಿಯ ಮೇಲಿನ ಭಕ್ತಿಯಲ್ಲಿ ಮಗುವಿನಂತೆ ಆಗುತ್ತಿದ್ದರು. ಅಂತಹ ಅಚಲವಾದ ನಂಬಿಕೆ ಸ್ವಾಮಿ ಆತ್ಮಸ್ಥಾನಂದರಲ್ಲೂ ಇತ್ತು. ಅಂತಹ ಕಾಳಿ ಮಾತೆಯ ಆಶೀರ್ವಾದ ಸದಾ ಭಾರತದ ಮೇಲಿದೆʼʼ ಎಂದರು.

ಪ್ರಧಾನಿ ಮೋದಿಯವರ ಭಾಷಣದ ನಂತರ, ಬಿಜೆಪಿ ಐಟಿ ಸೆಲ್‌ನ ನಾಯಕ ಅಮಿತ್ ಮಾಳವೀಯ ಅವರು ಸರಣಿ ಟ್ವೀಟ್‌ಗಳ ಮೂಲಕ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸಂಸದೆ ಮಹುವಾ ಮೊಯಿತ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ದೇವಿ ಇಡೀ ಭಾರತದ ಭಕ್ತಿಯ ಕೇಂದ್ರ ಆಗಿರುವ ಬಗ್ಗೆ ಮಾತನಾಡುತ್ತಿದ್ದರೆ, ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ಸಂಸದರು ದೇವಿಯ ಬಗ್ಗೆ ಮಾಡಿದ ಅಸಹ್ಯಕರ ಚಿತ್ರಣವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಕಾಳಿ ಪೋಸ್ಟರ್‌ ವಿವಾದ | ಜೈ ಮಾ ಕಾಳಿ! ಬೆಂಕಿಗೆ ತುಪ್ಪ ಸುರಿದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ

“ಪ್ರಧಾನಿ ನರೇಂದ್ರ ಮೋದಿಯವರು ಕಾಳಿಯು ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಭಕ್ತಿಯ ಕೇಂದ್ರ ಎಂದು ಪೂಜ್ಯಭಾವದಿಂದ ಮಾತನಾಡುತ್ತಾರೆ. ಮತ್ತೊಂದೆಡೆ ಕಾಳಿಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಟಿಎಂಸಿ ಸಂಸದರ ಮೇಲೆ ಕ್ರಮ ಕೈಗೊಳ್ಳೂವ ಬದಲು ಮಮತಾ ಬ್ಯಾನರ್ಜಿ ಅವರನ್ನು ಸಮರ್ಥಿಸುತ್ತಾರೆ” ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ.

ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಅವರು ʼʼನನಗೆ ಕಾಳಿ ದೇವಿಯು ಮಾಂಸ ಪ್ರಿಯೆ, ಮದ್ಯವನ್ನು ಸ್ವೀಕರಿಸುವ ದೇವತೆʼʼ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ತೃಣಮೂಲ ಈ ಮಾತಿನಿಂದ ಅಂತರ ಕಾಯ್ದುಕೊಂಡಿದ್ದರೂ, ಮಮತಾ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ತಿಂಗಳ ಆರಂಭದಲ್ಲಿ ಕೆನಡಾ ಮೂಲದ ತಮಿಳು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವಿ ಸಿಗರೇಟ್‌ ಸೇದುತ್ತಿರುವಂತೆ ತೋರಿಸುವ ಮೂಲಕ ಕಾಳಿ ಕುರಿತಾದ ವಿವಾದ ಆರಂಭವಾಗಿತ್ತು.

ಇದನ್ನೂ ಓದಿ: ನನ್ನ ಕಾಳಿ ವಿಲಕ್ಷಣ ದೇವಿ, ಹಿಂದುತ್ವ ಕಿತ್ತೊಗೆಯುತ್ತಾಳೆ; ಪೋಸ್ಟರ್‌ ಸಮರ್ಥಿಸಿಕೊಂಡ ಲೀನಾ

Exit mobile version