ವಡ್ನಗರ್: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಇಂದು ಗುಜರಾತ್‌ಗೆ (PM Modi Gujarat Visit) ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ, ತಮಗೆ ಬಾಲ್ಯದಲ್ಲಿ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕರೊಬ್ಬರನ್ನು ಭೇಟಿಯಾದರು. ಈ ಶಿಕ್ಷಕ ವಡ್ನಗರ್‌ದವರೇ ಆಗಿದ್ದು, ಜಗದೀಶ್ ನಾಯ್ಕ್ ಎಂದು ಹೆಸರು. ನರೇಂದ್ರ ಮೋದಿ ತಮ್ಮ ಶಿಕ್ಷಕರನ್ನು ಭೇಟಿಯಾಗಿ, ಅವರಿಗೆ ಕೈಮುಗಿಯುತ್ತಿರುವ ಫೋಟೋ ವೈರಲ್ ಆಗಿದೆ. ತಮ್ಮ ಬಳಿಯೇ ವಿದ್ಯೆ ಕಲಿತ ನರೇಂದ್ರ ಮೋದಿಯನ್ನು ಪ್ರಧಾನಿ ಸ್ಥಾನದಲ್ಲಿ ನೋಡಿ ಜಗದೀಶ್ ನಾಯ್ಕ್ ಹೆಮ್ಮೆಯಿಂದ ಆಶೀರ್ವಾದ ಮಾಡಿದ್ದಾರೆ. ಒಂದು ಕೈಯಲ್ಲಿ ಪ್ರಧಾನಿ ಮೋದಿಯ ಭುಜವನ್ನು ಹಿಡಿದುಕೊಂಡು, ಮತ್ತೊಂದು ಕೈಯನ್ನು ಅವರ ತಲೆಯ ಮೇಲೆ ನೇವರಿಸಿ ಹರಸಿದ್ದಾರೆ.
ಗುಜರಾತ್ ನರೇಂದ್ರ ಮೋದಿಯವರ ತವರು ರಾಜ್ಯ. ಸಾಮಾನ್ಯವಾಗಿ ಅವರ ಅಲ್ಲಿನ ಭೇಟಿ ವಿಶೇಷವಾಗಿಯೇ ಇರುತ್ತದೆ. ತಮ್ಮ ಮನೆಯಿರುವ ವಡ್ನಗರ್‌ಕ್ಕೆ ಆಗಾಗ ಭೇಟಿ ನೀಡುವ ಪ್ರಧಾನಿ, ಅಲ್ಲಿ ದರ್ಬಾರ್ಗಢ್ ಪ್ರದೇಶದಲ್ಲಿರುವ ತಾವು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಗೆ 2017ರಲ್ಲಿ ಭೇಟಿ ಕೊಟ್ಟಿದ್ದರು. ಮುಂಚಿತವಾಗಿ ಯಾವುದೇ ಸೂಚನೆಯನ್ನೂ ಕೊಡದೆ ಶಾಲೆಗೆ ಹೋಗಿ ಹಳೇ ನೆನಪು ಮೆಲುಕು ಹಾಕಿದ್ದರು.
ಇದನ್ನೂ ಓದಿ: International Yoga day : ಮೈಸೂರಿಗೆ ಆಗಮಿಸುತ್ತಾರೆ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಇಂದು ಒಂದು ದಿನದ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದರು. ರಾಜ್ಯದಲ್ಲಿ ಸುಮಾರು 3,050 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಇಂದು ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ದಕ್ಷಿಣ ಗುಜರಾತ್‌ನಲ್ಲಿ 991 ಕೋಟಿ ರೂಪಾಯಿ ವೆಚ್ಚದ ನೀರು ಪೂರೈಕೆ ಯೋಜನೆಯನ್ನು ಉದ್ಘಾಟಿಸಿದ್ದು, ಇದರಿಂದ ನವಸಾರಿ, ಸೂರತ್, ವಸ್ಲಾಡ್ ಮತ್ತು ತಾಪಿ ಪ್ರದೇಶಗಳಿಗೆ ಅನುಕೂಲವಾಗಲಿದೆ. ಇಷ್ಟೇ ಅಲ್ಲದೆ, ನಲ್ ಸೆ ಜಲ್ (ನಲ್ಲಿಯಿಂದ ನೀರು ಸಂಪರ್ಕ) ಎಂಬ 163 ಕೋಟಿ ರೂ. ವೆಚ್ಚದ ಯೋಜನೆಯನ್ನೂ ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಇದೂ ಕೂಡ ಸೂರತ್ ನವಸಾರಿ, ವಲ್ಸಾಡ್, ತಾಪಿ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ. ಹಾಗೇ, ನವಸಾರಿಯಲ್ಲಿ 542 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವೈದ್ಯಕೀಯ ಕಾಲೇಜಿಗೆ ಭೂಮಿಪೂಜೆ ನೆರವೇರಿಸಿದರು.
ಈ ಬಾರಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಕಳೆದ ಬಾರಿ ಉತ್ತರ ಪ್ರದೇಶ ಚುನಾವಣೆಗೂ ಪೂರ್ವ ಪ್ರಧಾನಿ ಮೋದಿ ಆ ರಾಜ್ಯಕ್ಕೆ ಮ್ಯಾರಥಾನ್ ಭೇಟಿ ಕೊಟ್ಟು ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಅದೇ ಮಾದರಿಯನ್ನೀಗ ಗುಜರಾತ್‌ನಲ್ಲೂ ಕಾರ್ಯರೂಪಕ್ಕೆ ತರಲಾಗುತ್ತಿದೆ. ನರೇಂದ್ರ ಮೋದಿ ಆಗಾಗ ಇಲ್ಲಿಗೆ ಭೇಟಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ಉಪನಗರ ರೈಲು ಯೋಜನೆಗೆ ಪ್ರಧಾನಿ ಮೋದಿ ಶಿಲಾನ್ಯಾಸ