ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಅಹ್ಮದಾಬಾದ್ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. 100 ವರ್ಷ ವಯಸ್ಸಿನ ಹೀರಾಬೆನ್ ವಯೋಸಹಜವಾದ ಕೆಲವು ಕಾಯಿಲೆಗಳಿಗೆ ಒಳಗಾಗಿದ್ದು ಸದ್ಯ ಅವರ ಪರಿಸ್ಥಿತಿ ತುಸು ಗಂಭೀರವಾಗಿಯೇ ಇದೆ ಎಂದೂ ಹೇಳಲಾಗಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಕೈಲಾಸನಾಥನ್ ಅವರು ಹೀರಾಬೆನ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿಕೊಟ್ಟಿದ್ದಾರೆ.
ಹೀರಾಬೆನ್ ಅವರು ಇದೇ ವರ್ಷ ಜೂನ್ 18ರಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಂದು ಪ್ರಧಾನಿ ನರೇಂದ್ರ ಮೋದಿ ಅಮ್ಮನನ್ನು ಭೇಟಿಯಾಗಿ ಅವರಿಗೆ ಪಾದಪೂಜೆ ನೆರವೇರಿಸಿ, ಸಿಹಿ ತಿನ್ನಿಸಿದ್ದರು. ಅದಾದ ಬಳಿಕ ಈ ಸಲ ಗುಜರಾತ್ ವಿಧಾನಸಭೆ ಚುನಾವಣೆಗೂ ಪೂರ್ವ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈಗ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ನಿನ್ನೆ (ಡಿ.27ರಂದು)ಯಷ್ಟೇ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಮತ್ತು ಅವರ ಕುಟುಂಬದವರು ಇದ್ದ ಕಾರು ಮೈಸೂರಿನ ಬಂಡೀಪುರದ ಕಡಕೊಳ ಬಳಿ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಪ್ರಹ್ಲಾದ್ ಮೋದಿ, ಅವರ ಪುತ್ರ ಮೇಹುಲ್ ಮೋದಿ, ಸೊಸೆ ಜಿಂದಾಲ್ ಮೋದಿ, ಮೊಮ್ಮಗ ಆರು ವರ್ಷದ ಮೇನತ್ ಮೇಹುಲ್ ಮೋದಿ ಹಾಗೂ ಚಾಲಕ ಸತ್ಯನಾರಾಯಣ ಗಾಯಗೊಂಡಿದ್ದಾರೆ. ಅದರಲ್ಲೂ ಬಾಲಕ ಮೇನತ್ ಮೇಹುಲ್ ಕಾಲುಮೂಳೆ ಕಟ್ ಆಗಿದೆ ಎಂದು ವರದಿಯಾಗಿದೆ. ಇವರೆಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Video| ಅಮ್ಮ ಹೀರಾಬೆನ್ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ; ಚಹಾ ಸವಿಯುತ್ತ ಮಾತುಕತೆ