ನವದೆಹಲಿ: ಕ್ರಿಶ್ಚಿಯನ್ನರ ಪವಿತ್ರ ಹಬ್ಬ ‘ಈಸ್ಟರ್’ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯಲ್ಲಿರುವ ಸ್ಯಾಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್‌ಗೆ ಭೇಟಿ ನೀಡಿದ್ದು, ಕ್ರೈಸ್ತ ಪಾದ್ರಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಇದೇ ಮೊದಲ ಬಾರಿಗೆ ಸ್ಯಾಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್‌ಗೆ ಮೋದಿ ಭೇಟಿ ನೀಡಿದ ಕಾರಣ ಚರ್ಚ್‌ನ ಪಾದ್ರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರು ಚರ್ಚ್‌ಗೆ ತೆರಳುತ್ತಲೇ ಪಾದ್ರಿಗಳು ಪ್ರಧಾನಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದಾದ ಬಳಿಕ ಪಾದ್ರಿಗಳ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮೋದಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ, ಚರ್ಚ್ ಆವರಣದಲ್ಲಿ ಸಸಿ ನೆಡುವ ಮೂಲಕ ಹಬ್ಬವನ್ನು ಸಾರ್ಥಕವಾಗಿ ಆಚರಿಸಿದರು. ಚರ್ಚ್‌ಗೆ ಭೇಟಿ ನೀಡಿದ ಬಳಿಕ ಟ್ವೀಟ್ ಮಾಡಿದ ಮೋದಿ, “ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಸ್ಯಾಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್‌ಗೆ ಭೇಟಿ ನೀಡುವ ವಿಶೇಷ ಅವಕಾಶ ನನ್ನದಾಗಿತ್ತು. ಕ್ರೈಸ್ತ ಧರ್ಮದ ಗುರುಗಳನ್ನು ಕೂಡ ಭೇಟಿಯಾದೆ” ಎಂದು ಹೇಳಿದ್ದಾರೆ. ಹಾಗೆಯೇ, ಭೇಟಿಯ ವಿಡಿಯೊ, ಫೋಟೊ ಹಂಚಿಕೊಂಡಿದ್ದಾರೆ.
ಪಾದ್ರಿಗಳಿಂದ ಆತ್ಮೀಯ ಸ್ವಾಗತ
ಮೋದಿ ಭೇಟಿ ಬಳಿಕ ಮಾತನಾಡಿದ ಬಿಷಪ್ ಅನಿಲ್ ಖುಟೊ ಸಂತಸ ವ್ಯಕ್ತಪಡಿಸಿದರು. “ಇದೇ ಮೊದಲ ಬಾರಿಗೆ ಈ ಚರ್ಚ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿರುವುದು ಸಂತಸದ ಸಂಗತಿಯಾಗಿದೆ. ಅವರು ಮೇಣದಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ನಾವು ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆವು. ಅವರು ಸಸಿಯನ್ನೂ ನೆಟ್ಟರು” ಎಂದು ತಿಳಿಸಿದರು.
ಈಸ್ಟರ್ ಕ್ರಿಶ್ಚಿಯನ್ನರ ಪವಿತ್ರ ಹಬ್ಬವಾಗಿದೆ. ಕ್ರಿಶ್ಚಿಯನ್ನರು ಎರಡು ಹಬ್ಬಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಕ್ರಿಸ್ಮಸ್ ಹಾಗೂ ಈಸ್ಟರ್ ಅವರ ಪ್ರಮುಖ ಹಬ್ಬಗಳಾಗಿವೆ. ಕ್ರಿಸ್ಮಸ್ ಹಬ್ಬದಲ್ಲಿ ಯೇಸು ಕ್ರಿಸ್ತ ಜನಿಸುವ ಮೂಲಕ ಸಂಭ್ರಮ ಉಂಟು ಮಾಡಿದರೆ, ಈಸ್ಟರ್ ಹಬ್ಬವು ಹೊಸ ಭರವಸೆಯನ್ನು ಹುಟ್ಟುಹಾಕುತ್ತಾ ಮುಂದೆ ಸಾಗುತ್ತದೆ ಎಂಬ ನಂಬಿಕೆ ಇದೆ.
ಕೆಲ ತಿಂಗಳ ಹಿಂದೆ ಮೋದಿ ಅವರು ಮುಂಬೈನಲ್ಲಿ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆಯೊಂದನ್ನು ಉದ್ಘಾಟಿಸಿದ್ದರು. ಮುಸ್ಲಿಂ ಮುಖಂಡರ ಕೈ ಹಿಡಿದು ಓಡಾಡಿದ್ದರು. ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಮುಖ್ಯಸ್ಥರಾದ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರ ಕೈ ಹಿಡಿದು ಮೋದಿ ಕ್ಯಾಂಪಸ್‌ನಲ್ಲಿ ಓಡಾಡಿದ್ದರು. ಅಲ್ಜಮೀಟಸ್-ಸೈಫಿಯಾ ಕ್ಯಾಂಪಸ್‌ಅನ್ನು ಉದ್ಘಾಟಿಸಿದ್ದರು. ಇದಾದ ಬಳಿಕವೂ ಮುಸ್ಲಿಂ ಮುಖಂಡರ ಜತೆ ಮೋದಿ ಆತ್ಮೀಯವಾಗಿ ಸಂವಾದ ನಡೆಸಿದ್ದರು.
ಇದನ್ನೂ ಓದಿ: Narendra Modi: ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿ ಜತೆ ಮೋದಿ ಮಾತು, ಆನೆ ಸಂರಕ್ಷಣೆಗೆ ಮೆಚ್ಚುಗೆ