ನವ ದೆಹಲಿ: 74ನೇ ಗಣರಾಜ್ಯೋತ್ಸವ (Republic 2023) ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು, ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ರಕ್ಷಣಾ ಸಿಬ್ಬಂದಿ ಇದ್ದರು. ಇಂದು ಪ್ರಧಾನಿ ಮೋದಿಯವರು ಕಪ್ಪು ಕೋಟ್ ಧರಿಸಿ, ಬಿಳಿ ಶಾಲನ್ನು ಕುತ್ತಿಗೆಗೆ ಹೊದ್ದಿದ್ದಾರೆ. ಹಾಗೇ, ಕೇಸರಿ, ಕೆಂಪು-ಹಳದಿ ಮಿಶ್ರಿತ ರುಮಾಲನ್ನು ತಲೆಗೆ ಕಟ್ಟಿದ್ದಾರೆ. ಪ್ರತಿವರ್ಷ ಸ್ವಾತಂತ್ರ್ಯೋತ್ಸವದಂದು ಪ್ರಧಾನಿಯವರು ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿದರೆ, ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಧ್ವಜಾರೋಹಣ ಮಾಡುತ್ತಾರೆ.
ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿಯನ್ನು ಕಳೆದ ವರ್ಷ ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ವಿಲೀನ ಗೊಳಿಸಲಾಗಿದೆ. ಆ ಸ್ಮಾರಕಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಅಲ್ಲಿಂದ ಕರ್ತವ್ಯ ಪಥಕ್ಕೆ ಆಗಮಿಸಿದ್ದಾರೆ. ಹಾಗೇ, ಉಪರಾಷ್ಟ್ರಪತಿ ದ್ರೌಪದಿ ಮುರ್ಮು, ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯ ಅತಿಥಿಯಾಗಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಕರ್ತವ್ಯ ಪಥಕ್ಕೆ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಧ್ವಜಾರೋಹಣ, ಪರೇಡ್ ಪ್ರಾರಂಭವಾಗಲಿದೆ.
ಇಂದು ಬೆಳಗ್ಗೆ ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಸ್ವಾತಂತ್ರ್ಯೋತ್ಸವದ 75ನೇ ವರ್ಷದ (ಅಮೃತಮಹೋತ್ಸವ) ಆಚರಣೆಯ ಸಂಭ್ರಮದಲ್ಲಿದೆ. ದೇಶಕ್ಕಾಗಿ ತ್ಯಾಗ-ಬಲಿದಾನ ಮಾಡಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಿ, ಅವರ ಧ್ಯೇಯವನ್ನು ಅನುಷ್ಠಾನಕ್ಕೆ ತರಲು ನಾವೆಲ್ಲ ಒಗ್ಗಟ್ಟಾಗಿ ಮುನ್ನಡೆಯಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದರು.