ನವ ದೆಹಲಿ: ಸ್ವಚ್ಛ ಭಾರತ ಅಭಿಯಾನದ ಹರಿಕಾರ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮತ್ತೆ ಕಸ ಹೆಕ್ಕುವ ಮೂಲಕ ಸುದ್ದಿಮಾಡಿದ್ದಾರೆ.
ಇಲ್ಲಿಯ ಏಕೀಕೃತ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಸುರಂಗ ಮಾರ್ಗವನ್ನು ಪರಿಶೀಲಿಸುವ ವೇಳೆ ಅಲ್ಲಿ ಬಿದ್ದಿದ್ದ ನೀರಿನ ಬಾಟಲಿಯನ್ನು ತಾವೇ ಹೆಕ್ಕಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ.
920 ಕೋಟಿ ರೂ. ವೆಚ್ಚದಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರ ಸರಕಾರವೇ ಅನುದಾನ ನೀಡಿದೆ. ಸುರಂಗದ ಗೋಡೆಗಳನ್ನು ಆಕರ್ಷಕ ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ. ಇದನ್ನು ನೋಡುತ್ತಾ ಸಾಗಿದ ಮೋದಿಗೆ ಖಾಲಿ ಬಾಟಲಿ, ಕೆಲ ಪೇಪರ್ ತುಣುಕುಗಳು ಕಂಡಿದ್ದು, ಅವುಗಳನ್ನು ಎತ್ತಿಕೊಂಡೇ ಮುಂದೆ ಸಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
೨೦೧೯ ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ತಮಿಳುನಾಡಿನ ಮಾಮಲ್ಲಪುರಂ ಸಮುದ್ರ ತೀರದಲ್ಲಿ ಜಾಗಿಂಗ್ ಮಾಡುತ್ತ ಪ್ಲಾಸ್ಟಿಕ್ ಕಸವನ್ನು ಹೆಕ್ಕಿದ್ದರು. ಇದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಮೋದಿಯ ಈ ನಡೆಗೆ (ಪ್ಲಾಗಿಂಗ್) ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಪ್ರಧಾನಿ ಮೋದಿಯವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದ, ಪಿಯೂಷ್ ಗೋಯಲ್ ಸೇರಿದಂತೆ ಅನೇಕ ಸಚಿವರು, ಬಿಜೆಪಿ ನಾಯಕರು ಈ ವಿಡಿಯೋವನ್ನು ಶೇರ್ ಮಾಡಿ, ಮೋದಿಯವರು ಕಸ ಹೆಕ್ಕಿರುವುದು ನಾವೆಲ್ಲರೂ ಅನುಸರಿಸಬೇಕಾದ ಆದರ್ಶದ ನಡೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.