Site icon Vistara News

Ram Mandir : ‘ಪೂಜಿಸಲೆಂದೆ ಹೂಗಳ ತಂದೆ’ ಕನ್ನಡ ಹಾಡಿಗೆ ತಲೆದೂಗಿದ ಪ್ರಧಾನಿ ಮೋದಿ

sivasri skandaprasad

ವಿಸ್ತಾರ ನ್ಯೂಸ್ ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ರಾಮ ನಾಮ ಜಪದಲ್ಲಿ ನಿರತರಾಗಿದ್ದಾರೆ. ರಾಮ ಮಂದಿರದ (Ram Mandir) ಪ್ರಾಣ ಪ್ರತಿಷ್ಠೆ ನಡೆಸಲು ಅನುಷ್ಠಾನ ಕೈಗೊಂಡಿರುವ ಅವರು ಕಠಿಣ ಧಾರ್ಮಿಕ ವ್ರತದಲ್ಲಿದ್ದಾರೆ. ಹೀಗಾಗಿ ದಿನವಿಡೀ ರಾಮನ ನಾಮಸ್ಮರಣೆ ಮಾಡುತ್ತಿದ್ದಾರೆ. ಏತನ್ಮಧ್ಯೆ ಅವರು ಕನ್ನಡದ ಸುಪ್ರಸಿದ್ಧ ಹಾಡು (Kannada Song) ‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗೆ ತಲೆದೂಗಿದ್ದಾರೆ. ಅವರು ಶಿವಶ್ರೀ ಸ್ಕಂದ ಪ್ರಸಾದ್ ಎಂಬ ಗಾಯಕಿ ಹಾಡಿರುವ ಹಾಡಿನ ಯೂಟ್ಯೂಬ್ ಲಿಂಕ್ ಪೋಸ್ಟ್ ಮಾಡಿರುವ ಪ್ರಧಾನಿ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮಾತಾಡಿದ್ದಾರೆ. ಟ್ವೀಟ್​ ಏಕಾಏಕಿ ವೈರಲ್ ಆಗಿದೆ. ಈ ಮೂಲಕ ಕನ್ನಡ ಭಾಷಿಕರ ಹಾಗೂ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ ಮೋದಿ.

ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ಗಾಯನವು ಪ್ರಭು ಶ್ರೀ ರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುತ್ತವೆ. ಜೈಶ್ರೀರಾಮ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ಟ್ವೀಟ್ ಇಲ್ಲಿದೆ

ಶಿವಶ್ರೀ ಸ್ಕಂದ ಪ್ರಸಾದ್ ಅವರು ಈಹಾಡನ್ನು ಅತ್ಯಂತ ಭಕ್ತಿಪೂರ್ವಕವಾಗಿ ಹಾಡಿದ್ದಾರೆ. ಅವರ ಹಾಡಿನಲ್ಲಿ ರಾಮ ಭಕ್ತಿಯು ಸಹಜವಾಗಿ ಸೃಜಿಸುತ್ತದೆ. ಹೀಗಾಗಿ ಅದನ್ನು ಮೆಚ್ಚಿ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Ram Mandir : ರಾಮನ ಹಣೆಗೆ ಸೂರ್ಯ ಕಿರಣ ತಿಲಕವಿಡುವ ವಿಶೇಷ ಯಂತ್ರ ತಯಾರಾಗಿದ್ದು ಬೆಂಗಳೂರಿನಲ್ಲಿ

ಸಿನಿಮಾದ ಹಾಡು


‘ಪೂಜಿಸಲೆಂದೆ ಹೂಗಳ ತಂದೆ’ ಹಾಡು ಮೂಲತಃ ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ ಹಾಡು. ದೊರೈ-ಭಗವಾನ್ ಜೋಡಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಇದು ಕನ್ನಡದ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿದೆ. ಸಿನಿಮಾ 1974 ರಲ್ಲಿ ಈ ಸಿನಿಮಾ ತೆರೆ ಕಂಡು ಜನಮೆಚ್ಚುಗೆ ಗಳಿಸಿತ್ತು. ಸಾಹಿತ್ಯ ಚಿ. ಉದಯಶಂಕರ್ ಅವರದ್ದಾಗಿದ್ದು, ರಾಜನ್ ನಾಗೇಂದ್ರ ಅವರು ಸಂಗೀತ ನೀಡಿದ್ದಾರೆ. ಹಾಡಿದವರು ಖ್ಯಾತ ಗಾಯಕಿ ಎಸ್​ ಜಾನಕಿ. ಈ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಭಾವನಾತ್ಮಕವಾಗಿ ಹಾಡಿ ಯೂಟ್ಯೂಬ್​ನಲ್ಲಿ ಪ್ರಕಟಿಸಿದ್ದರು.

ಶಿವಶ್ರೀ ಸಂತಸ

ತಾವು ಹಾಡಿರುವ ವಿಡಿಯೊವನ್ನು ಪೋಸ್ಟ್​ ಮಾಡಿರುವುದಕ್ಕೆ ಗಾಯಕಿ ಶಿವಶ್ರೀ ಅವರೂ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನಗೆ ತುಂಬಾ ಸಂತೋಷದ ಕ್ಷಣ. ನಾನು ಈಗ ಅನುಭವಿಸುತ್ತಿರುವ ಭಾವನೆಯನ್ನು ವಿವರಿಸಲು ನನಗೆ ಪದಗಳಿಲ್ಲ. ಇದು ಒಂದು ರೋಮಾಂಚಕ ಕ್ಷಣ. ಇದು ಭಗವಾನ್ ರಾಮನಿಂದ ಬಂದ ಆಶೀರ್ವಾದ ಎಂದು ಅವರು ಹೇಳಿದ್ದಾರೆ.

ಈ ಭಾವಪೂರ್ಣ ಅಭಿವ್ಯಕ್ತಿಗಾಗಿ ಶಿವಶ್ರೀ ಸ್ಕಂದಪ್ರಸಾದ್ ಮತ್ತು ಅದನ್ನು ಗುರುತಿಸಿ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

Exit mobile version