Site icon Vistara News

ರಾಜಸ್ಥಾನ ಮುಖ್ಯಮಂತ್ರಿಯನ್ನು ಮತ್ತೆ ಹೊಗಳಿದ ಪ್ರಧಾನಿ ಮೋದಿ; ಪೈಲಟ್​ ಹೇಳಿದ್ದೇ ಸತ್ಯವಾ? ಮತ್ತೊಬ್ಬ ‘ಗುಲಾಂ’ ಆಗ್ತಾರಾ ಗೆಹ್ಲೋಟ್ ?

PM Modi

ನವ ದೆಹಲಿ: ರಾಜಸ್ಥಾನ ಕಾಂಗ್ರೆಸ್​​ನಲ್ಲಿ ಈಗಾಗಲೇ ಬೆಂಕಿ ಉರಿಯುತ್ತಲೇ ಇದೆ. ಅದು ತುಸುಮಟ್ಟಿಗೆ ಸಣ್ಣಗಾಗಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಮ್ಮೆ ಅಶೋಕ್​ ಗೆಹ್ಲೋಟ್​​ರನ್ನು ಹೊಗಳಿ, ಇನ್ನೊಂದು ಕಿಡಿ ಹೊತ್ತಿಸಿದ್ದಾರೆ.

ಶುಕ್ರವಾರ ಎಲ್ಲ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್​ ಗವರ್ನರ್​​ಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್​ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ಭಾರತಕ್ಕೆ ಜಿ20 ಶೃಂಗದ ಅಧ್ಯಕ್ಷತೆ ದೊರೆತ ಬಗ್ಗೆ ಪ್ರಸ್ತಾಪ ಮಾಡಿದರು. ಹಾಗೇ, ಜಿ20 ಶೃಂಗದ ಮೊದಲ ಪೂರ್ವಸಿದ್ಧತಾ ಸಭೆ ರಾಜಸ್ಥಾನದ ಉದಯಪುರದಲ್ಲಿ ಡಿಸೆಂಬರ್​ 4ರಂದು ನಡೆದ ಬಗ್ಗೆಯೂ ಮಾತನಾಡಿದ ಅವರು, ‘ಅಂದು ಜಿ20 ಶೃಂಗದ ಪೂರ್ವಸಿದ್ಧತಾ ಸಭೆ (ಶೆರ್ಪಾ ಸಭೆ)ಗಾಗಿ ನೀವು ತುಂಬ ಚೆನ್ನಾಗಿ ಮತ್ತು ಅತ್ಯುತ್ತಮವಾಗಿ ವ್ಯವಸ್ಥೆ ಮಾಡಿದ್ದಿರಿ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರನ್ನು ಹೊಗಳಿದರು.

ಅಷ್ಟೇ ಅಲ್ಲ ‘ಜಿ 20 ಶೃಂಗದ ಶೆರ್ಪಾ ಸಭೆ ಉದಯಪುರದಲ್ಲಿ ನಡೆದ ವೇಳೆ ರಾಜಸ್ಥಾನ ಸರ್ಕಾರ, ಅತ್ಯುತ್ತಮವಾದ- ರಾಜಸ್ಥಾನಿ ಶೈಲಿಯ ಮತ್ತು ಸ್ಥಳೀಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಮೂಲಕ ಆದರಾತಿಥ್ಯ ನೀಡಿತು. ಅಲ್ಲಿ ನಡೆದ ಸಭೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮತ್ತು ಉನ್ನತ ಗುಣಮಟ್ಟ ಕಾಯ್ದುಕೊಳ್ಳಲಾಗಿತ್ತು. ಈ ವಿಚಾರದಲ್ಲಿ ರಾಜಸ್ಥಾನ ಸರ್ಕಾರ, ಉಳಿದೆಲ್ಲ ರಾಜ್ಯಗಳ ಸರ್ಕಾರಗಳಿಗೂ ಮಾದರಿ ಎಂದು ಹೇಳಿದ ಪ್ರಧಾನಿ ಮೋದಿ, ಅಶೋಕ್​ ಗೆಹ್ಲೋಟ್​ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಹಾಗೇ, ಆ ಕಾರ್ಯಕ್ರಮದ ರೂಪುರೇಷೆ ದಾಖಲೆಗಳನ್ನು ಉಳಿದ ರಾಜ್ಯಗಳಿಗೂ ಕೊಡಿ, ಇದರಿಂದ ಮುಂದಿನ ಜಿ20 ಶೆರ್ಪಾ ಸಭೆಗಳನ್ನು ಆಯೋಜಿಸುವವರಿಗೆ ಅನುಕೂಲವಾಗುತ್ತದೆ ಎಂದೂ ಪ್ರಧಾನಿ ಸಭೆಯಲ್ಲಿ ಹೇಳಿದರು.

ಕಳೆದ ತಿಂಗಳೂ ಹೊಗಳಿದ್ದರು
ನವೆಂಬರ್​ 2ರಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಮಂಗರ್ ಧಾಮ್​​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. 1913ರ ದಂಗೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮೃತಪಟ್ಟ ಬುಡಕಟ್ಟು ಜನಾಂಗದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಮಾರಂಭ ಇದಾಗಿತ್ತು. ರಾಜಸ್ಥಾನ, ಗುಜರಾತ್​ ಮತ್ತು ಮಧ್ಯಪ್ರದೇಶದ ಗಡಿಭಾಗದಲ್ಲಿರುವ ಮಂಗರ್ ಧಾಮ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​, ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದ ಬಳಿಕವೂ ಪ್ರಧಾನಿ ಮೋದಿ, ಗೆಹ್ಲೋಟ್​ರನ್ನು ಶ್ಲಾಘಿಸಿದ್ದರು. ಅತ್ಯಂತ ಹಿರಿಯ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಜತೆ ಇಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ಗೆಹ್ಲೋಟ್​ ಅವರು ಅಂದಿಗೂ, ಇಂದಿಗೂ ಅತ್ಯಂತ ಹಿರಿಯ ಮುಖ್ಯಮಂತ್ರಿ ಮತ್ತು ರಾಜಕಾರಣಿ ಎಂದು ಹೇಳಿದ್ದರು.

ಪೈಲಟ್​ ಕಣ್ಣು ಕೆಂಪಾಗಿತ್ತು!
ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ನಡುವಿನ ಮನಸ್ತಾಪಕ್ಕೆ ವರ್ಷಗಳ ಇತಿಹಾಸವಿದ್ದು, ಇತ್ತೀಚೆಗೆ ಅದು ತಾರಕಕ್ಕೂ ಏರಿದೆ. ನವೆಂಬರ್​ನಲ್ಲಿ ಮೋದಿಯವರು ಅಶೋಕ್​ ಗೆಹ್ಲೋಟ್​ರನ್ನು ಹೊಗಳುತ್ತಿದ್ದಂತೆ ಸಚಿನ್​ ಪೈಲಟ್​ ತಿರುಗೇಟು ಕೊಟ್ಟಿದ್ದರು. ‘ಹಿಂದೊಮ್ಮೆ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್​​ರನ್ನು ಹೊಗಳಿದ್ದರು. ಬಳಿಕ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಈಗ ಮತ್ತೆ ಅವರು ಗೆಹ್ಲೋಟ್​​ರನ್ನು ಹೊಗಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು. ಅಂದರೆ ಗುಲಾಂ ನಬಿ ಆಜಾದ್​ ಕಾಂಗ್ರೆಸ್​ ತೊರೆದು ಬೇರೆ ಪಕ್ಷ ಕಟ್ಟಲು ಹೋದ ಮಾದರಿಯಲ್ಲೇ, ಗೆಹ್ಲೋಟ್ ಕೂಡ ಕಾಂಗ್ರೆಸ್ ತೊರೆಯಬಹುದು ಎಂಬರ್ಥದಲ್ಲಿ ಕುಹಕವಾಡಿದ್ದರು.

2020ರಲ್ಲಿ ಸಚಿನ್ ಪೈಲಟ್​ ಒಮ್ಮೆ ಕಾಂಗ್ರೆಸ್​​ನಿಂದ ಬಂಡಾಯವೆದ್ದು, ರೆಸಾರ್ಟ್ ರಾಜಕಾರಣ ನಡೆಸಿದ್ದರು. ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಪೈಲಟ್​ ಮತ್ತು ಅಶೋಕ್​ ಗೆಹ್ಲೋಟ್​ ನಡುವೆ ಇತ್ತೀಚೆಗೆ ಭಾರಿ ಗುದ್ದಾಟವೇ ನಡೆಯುತ್ತಿದೆ. ‘ಪೈಲಟ್​ ಒಬ್ಬ ವಿಶ್ವಾಸಘಾತುಕ’ ಎಂದು ಇತ್ತೀಚೆಗೆ ಗೆಹ್ಲೋಟ್​ ಹೇಳಿದ್ದಾರೆ.

ಮೋದಿ ಹೊಗಳಿಕೆಯೇ ಮುಳ್ಳಾಗುತ್ತದೆಯಾ?
ಗುಲಾಂ ನಬಿ ಆಜಾದ್​ರನ್ನು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೊಗಳಿದ್ದರು. ಹಾಗೇ, ಅವರು ರಾಜ್ಯ ಸಭೆ ಸದಸ್ಯ ಸ್ಥಾನದಿಂದ ನಿವೃತ್ತರಾದ ಸಮಯದಲ್ಲಿ ಕಣ್ಣೀರು ಹಾಕಿ ಬೀಳ್ಕೊಟ್ಟಿದ್ದರು. ಇದೇ ಕಾರಣಕ್ಕೆ ಗುಲಾಂ ನಬಿ ಆಜಾದ್ ಅದೆಷ್ಟೋ ಸಲ ಸ್ವಪಕ್ಷೀಯರ ವಾಗ್ಬಾಣಕ್ಕೆ ಗುರಿಯಾಗಿದ್ದರು. ಕಾಂಗ್ರೆಸ್​ನ ಹಲವು ನಾಯಕರು ನಬಿ ಅವರನ್ನು ಟೀಕಿಸಲು ತೊಡಗಿದ್ದರು. ಅದರಲ್ಲೂ ಪದ್ಮಭೂಷಣ ಸಿಕ್ಕಾಗ, ಕಾಂಗ್ರೆಸ್ಸಿನ ಹಲವರು, ತಮ್ಮ ನಾಯಕನೊಬ್ಬನಿಗೆ ದೇಶದ ಉನ್ನತ ಪ್ರಶಸ್ತಿಯೊಂದು ಬಂದಿತಲ್ಲ ಎಂದು ಖುಷಿಪಡುವ ಬದಲು ಸಂಪೂರ್ಣವಾಗಿ ರಾಜಕೀಯ ಲೇಪನ ಮಾಡಿದ್ದರು. ಅದನ್ನೂ ವ್ಯಂಗ್ಯವಾಡಿದ್ದರು. ಅಂತಿಮವಾಗಿ ಆಜಾದ್​ ಕಾಂಗ್ರೆಸ್​ ತೊರೆದು, ಜಮ್ಮು-ಕಾಶ್ಮೀರದಲ್ಲಿ ಹೊಸ ಪಕ್ಷ ಕಟ್ಟುತ್ತಿದ್ದಾರೆ.

ಈಗ ಇನ್ನೊಬ್ಬ ಕಾಂಗ್ರೆಸ್ ನಾಯಕ ಗೆಹ್ಲೋಟ್​ರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳುತ್ತಿರುವುದು ಸಚಿನ್​ ಪೈಲಟ್​ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದೆ ಕೊವಿಡ್​ 19 ಸೋಂಕಿನ ಸಮಯದಲ್ಲೂ, ರಾಜಸ್ಥಾನದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗೆಹ್ಲೋಟ್​ ನಿಭಾಯಿಸಿದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಮೋದಿಯವರ ಹೊಗಳಿಕೆಯೇ ಗೆಹ್ಲೋಟ್​​ಗೆ ಮುಳ್ಳಾಗಲಿದೆಯಾ? ಇದೇ ವಿಚಾರವೇ ಮತ್ತೊಂದು ವಿವಾದಕ್ಕೆ ನಾಂದಿ ಹಾಡಲಿದೆಯಾ? ಗೆಹ್ಲೋಟ್​ ಕೂಡ ಗುಲಾಂ ನಬಿ ಆಜಾದ್​ ದಾರಿಯಲ್ಲೇ ಹೆಜ್ಜೆ ಇಡುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳೂ ಮೂಡಿವೆ.

ಇದನ್ನೂ ಓದಿ: AshoK Gehlot | ಕಾಂಗ್ರೆಸ್‌ ಚುನಾವಣೆ ಸಿದ್ಧತೆ ಮಧ್ಯೆಯೇ ಶಾಸಕರ ಸಭೆ ನಡೆಸಿ ಅಶೋಕ್‌ ಗೆಹ್ಲೋಟ್‌ ಶಕ್ತಿ ಪ್ರದರ್ಶನ

Exit mobile version