Site icon Vistara News

Viral Video: ಗಾಯಕ ಸ್ನೇಹದೀಪ್​​ರ ಕೇಸರಿಯಾ ಹಾಡಿಗೆ ಪ್ರಧಾನಿ ಮೋದಿ ಫಿದಾ; ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಎಂದು ಟ್ವೀಟ್​

PM Modi Praises Snehdeep Singh Kalsi who sung Kesariya Song In 5 Languages

#image_title

ನವ ದೆಹಲಿ: ಬ್ರಹ್ಮಾಸ್ತ್ರ ಹಿಂದಿ ಸಿನಿಮಾದ ‘ಕೇಸರಿಯಾ ತೇರಾ’ (kesariya tera)ಹಾಡನ್ನು ಐದು ಭಾಷೆಗಳಲ್ಲಿ ಹಾಡಿದ ಗಾಯಕ ಸ್ನೇಹದೀಪ್​ ಸಿಂಗ್​ ಕಲ್ಸಿ (Snehdeep Singh Kalsi) ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಕೇಸರಿಯಾ ಹಾಡನ್ನು ಸ್ನೇಹದೀಪ್​ ಅವರು ಮಲೆಯಾಳಂ, ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಹಾಡಿದ್ದ ಚಿಕ್ಕದಾದ, ಒಂದೂವರೆ ನಿಮಿಷಗಳ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಶೇರ್ ಮಾಡಿಕೊಂಡು, ಗಾಯಕನನ್ನು ಮೆಚ್ಚಿ ಕ್ಯಾಪ್ಷನ್​ ಬರೆದಿದ್ದಾರೆ.

ಸ್ನೇಹದೀಪ್​ ಅವರು ಅದ್ಭುತವಾಗಿ ಈ ಹಾಡನ್ನು ನಿರೂಪಿಸಿದ್ದಾರೆ. ಇಂಪಾದ ಗಾಯನದೊಂದಿಗೆ, ‘ಏಕ್ ಭಾರತ್​, ಶ್ರೇಷ್ಠ ಭಾರತ್​’ ಎಂಬ ಅಭಿವ್ಯಕ್ತಿಯನ್ನು ಹೊರಹಾಕಿದ್ದಾರೆ. ಇದು ನಿಜಕ್ಕೂ ಸ್ಫೂರ್ತಿದಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಕ್ಯಾಪ್ಷನ್​ ಬರೆದಿದ್ದಾರೆ. ಅಂದರೆ ಒಂದು ಹಾಡನ್ನು ಐದು ವಿವಿಧ ಭಾಷೆಯಲ್ಲಿ ಹಾಡುವ ಮೂಲಕ, ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಕೇಸರಿಯಾ ಹಾಡನ್ನು ಸ್ನೇಹದೀಪ್​ ಅವರು ಐದು ಭಾಷೆಗಳಲ್ಲಿ ಹಾಡುವಾಗ ಒಮ್ಮೆಯೂ ನಿಲ್ಲಿಸಲಿಲ್ಲ. ಅಡೆತಡೆಯಿಲ್ಲದೆ, ಸಾರಾಸಗಾಟವಾಗಿ ಹಾಡಿಕೊಂಡು ಹೋಗುವುದನ್ನು ನೀವು ನೋಡಬಹುದು.

ಸ್ನೇಹದೀಪ್​ ಅವರು ಈ ಹಾಡನ್ನು ಮಲೆಯಾಳಂನಿಂದ ಶುರುಮಾಡುತ್ತರೆ, ಬಳಿಕ ಕ್ರಮವಾಗಿ ತೆಲುಗು, ಕನ್ನಡ, ತಮಿಳಿನಲ್ಲಿ ಹಾಡಿ, ಅಂತಿಮವಾಗಿ ಹಿಂದಿಯಲ್ಲಿ ಮುಕ್ತಾಯ ಮಾಡುತ್ತಾರೆ. ಸ್ನೇಹದೀಪ್​ ಅವರು ಮುಂಬಯಿ ಮೂಲದ ಗಾಯಕ. 2022ರ ಜುಲೈನಲ್ಲಿ ಬಿಡುಗಡೆಯಾದ ಬ್ರಹ್ಮಾಸ್ತ್ರ ಸಿನಿಮಾದ ಹಾಡನ್ನು ಅತ್ಯಂತ ಸುಂದರವಾಗಿ ರೂಪಿಸಿ ಈಗ ನೆಟ್ಟಿಗರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಈ ಸಿನಿಮಾದಲ್ಲಿ ಅಲಿಯಾ ಭಟ್​ ಮತ್ತು ರಣಬೀರ್ ಕಪೂರ್​ ಅಭಿನಯಿಸಿದ್ದು, ಕನ್ನಡದಲ್ಲೂ ಈ ಹಾಡು ಇದೆ.

ಸ್ನೇಹದೀಪ್​ ಅವರು ಪ್ರಧಾನಿ ನರೇಂದ್ರ ಮೋದಿಯವರ ಹೊಗಳಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ‘ನಿಮ್ಮ ಮೆಚ್ಚುಗೆಯ ಮಾತುಗಳು ನನ್ನ ಪಾಲಿಗೆ ಅತ್ಯಂತ ಅಮೂಲ್ಯ. ನನ್ನ ಹಾಡು ನಿಮ್ಮನ್ನು ತಲುಪಿ, ನೀವು ಅದನ್ನು ಖುಷಿಪಟ್ಟಿದ್ದು ನನಗೆ ಖುಷಿ’ ಎಂದು ಬರೆದುಕೊಂಡಿದ್ದಾರೆ. ಹಾಗೇ, ಈ ಟ್ವೀಟ್​​ನ್ನು ಅವರು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಪಿನ್​ ಮಾಡಿಟ್ಟುಕೊಂಡಿದ್ದಾರೆ.

Exit mobile version