ನವದೆಹಲಿ: 2014ರಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ 14 ರಾಷ್ಟ್ರಗಳು ತಮ್ಮ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ (Highest National Awards Of 14 Nations) ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ (Rajya Sabha) ತಿಳಿಸಿದೆ. ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು (Leadership) ಗುರುತಿಸಿ 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, 2018ರಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದನ್ನು ಇದೇ ವೇಳೆ ಉಲ್ಲೇಖಿಸಿದರು. 2014ರಿಂದ, ಭಾರತದ ಪ್ರಧಾನ ಮಂತ್ರಿಗಳು 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ವಿಶ್ವ ಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಭಾರತದ ಪ್ರಧಾನ ಮಂತ್ರಿಗೆ ಅತ್ಯುನ್ನತ ಪ್ರಶಸ್ತಿಗಳನ್ನು ನೀಡುವುದು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಅವರ ರಾಜನೀತಿ ಮತ್ತು ನಾಯಕತ್ವಕ್ಕೆ ಸ್ಪಷ್ಟವಾದ ಮನ್ನಣೆಯಾಗಿದೆ ಎಂದು ಮುರಳೀಧರನ್ ಹೇಳಿದರು. ಇದು ವಿಶ್ವ ವೇದಿಕೆಯಲ್ಲಿ ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡುವುದು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾನವೀಯತೆ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವುದು ಸೇರಿದಂತೆ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತದ ಮಾನ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ತಿಳಿಸಿದರು.
2016 ರಲ್ಲಿ ಅಫ್ಘಾನಿಸ್ತಾನದ ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್, 2018ರ ಫೆಬ್ರುವರಿಯಲ್ಲಿ ಪ್ಯಾಲೆಸ್ತೀನ್ ರಾಜ್ಯದ ಗ್ರ್ಯಾಂಡ್ ಕಾಲರ್, ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ ಸೇರಿದಂತೆ ಮೋದಿಗೆ ನೀಡಲಾದ ಹಲವಾರು ಗಮನಾರ್ಹ ಪ್ರಶಸ್ತಿಗಳನ್ನು ಸಚಿವರು ಇದೇ ವೇಳೆ ಪಟ್ಟಿ ಮಾಡಿದರು. ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಮತ್ತು ಏಪ್ರಿಲ್ 2019 ರಲ್ಲಿ ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿಯನ್ನು ಮೋದಿ ಪಡೆದಿದ್ದಾರೆಂದು ಹೇಳಿದರು.
2019ರ ಜೂನ್ ತಿಂಗಳಲ್ಲಿ ಮಾಲ್ಡೀವ್ಸ್‌ನಿಂದ ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ಇಝುದ್ದೀನ್, 2019ರ ಆಗಸ್ಟ್‌ನಲ್ಲಿ ಬಹ್ರೇನ್‌ನಿಂದ ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸಾನ್ಸ್, 2020ರ ಡಿಸೆಂಬರ್ ತಿಂಗಳಲ್ಲಿ ಅಮೆರಿಕದಿಂದ ಲೀಜನ್ ಆಫ್ ಮೆರಿಟ್, 2021ರ ಡಿಸೆಂಬರ್‌ನಲ್ಲಿ ಭೂತಾನ್‌ನಿಂದ ಆರ್ಡರ್ ಆಫ್ ಡ್ರ್ಯಾಗನ್ ಕಿಂಗ್ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ , ಈ ವರ್ಷದ ಮೇನಲ್ಲಿ ಫಿಜಿಯಿಂದ ಆರ್ಡರ್ ಆಫ್ ಫಿಜಿ, ಅದೇ ತಿಂಗಳು ಪಾಪುವಾ ನ್ಯೂ ಗಿನಿಯಾದಿಂದ ಲೋಗೋಹು ಮತ್ತು ಜೂನ್‌ನಲ್ಲಿ ಈಜಿಪ್ಟ್‌ನಿಂದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಸಚಿವರು ರಾಜ್ಯಸಭೆಗೆ ತಿಳಿಸಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಪ್ರಧಾನಿ ನರೇಂದ್ರ ಮೋದಿಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ