Site icon Vistara News

ಗ್ಯಾರಂಟಿ ಎಂದರೇ ಭ್ರಷ್ಟಾಚಾರ ಎಂಬುದನ್ನು ಜನರಿಗೆ ತಿಳಿಹೇಳಿ; ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಸೂಚನೆ

PM Modi

#image_title

ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಇಂದು ಮೇರಾ ಬೂತ್​, ಸಬ್​ ಸೆ ಮಜಬೂತ್​’ (Mera Booth Sabse Majboot) ಅಭಿಯಾನ ಉದ್ಘಾಟಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ಪ್ರತಿಪಕ್ಷಗಳ ಸಭೆ (Opposition Meet)ಬಗ್ಗೆ ಇದೇ ವೇಳೆ ಅವರು ವ್ಯಂಗ್ಯವಾಗಿ ಪ್ರಸ್ತಾಪ ಮಾಡಿದರು. ವಿಪಕ್ಷಗಳ ನಾಯಕರ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು. ಇದೊಂದು ಫೋಟೋಶೂಟ್​ ಕಾರ್ಯಕ್ರಮವಾಗಿತ್ತು ಎಂದು ಟೀಕಿಸಿದರು.

ಬಿಜೆಪಿ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಪ್ರತಿಪಕ್ಷಗಳ ಸಭೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ‘ಪ್ರತಿಪಕ್ಷಗಳು ಇಷ್ಟು ದೊಡ್ಡಮಟ್ಟದ ಆಂದೋಲನ ನಡೆಸಿದ್ದನ್ನು ಈ ಹಿಂದೆ ಎಂದಾದರೂ ನೋಡಿದ್ದಿರಾ? 2024ರಲ್ಲಾಗಲೀ, 2019ರ ಲೋಕಸಭೆ ಚುನಾವಣೆಯ ಹೊತ್ತಲ್ಲಾಗಲೀ ವಿರೋಧ ಪಕ್ಷಗಳು ಇಷ್ಟು ದೊಡ್ಡಮಟ್ಟಿಗೆ ಸಮರ ಸಾರಿರಲಿಲ್ಲ. ಈಗ ಶತ್ರುಗಳೆಲ್ಲ ಒಂದಾಗಿದ್ದಾರೆ. ಇಷ್ಟುದಿನ ಇಲ್ಲದ ಒಗ್ಗಟ್ಟು ಈಗ ಕಾಣುತ್ತಿದೆ. ಇಲ್ಲಿಯವರೆಗೆ ಪರಸ್ಪರರು ನಿಂದಿಸಿಕೊಳ್ಳುತ್ತಿದ್ದರು, ಈಗ ಅವರೆಲ್ಲ ಪರಸ್ಪರ ಸಾಷ್ಟಾಂಗ ನಮಸ್ಕಾರ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ನೋಡಿ ನಾವು ಸಿಟ್ಟಾಗಬೇಕಾದ ಅಗತ್ಯವಿಲ್ಲ. ಅವರ ಬಗ್ಗೆ ನಿಜಕ್ಕೂ ಕರುಣೆ ಮೂಡುತ್ತದೆ’ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು.

ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ ‘ಇತ್ತೀಚಿನ ದಿನಗಳಲ್ಲಿ ‘ಗ್ಯಾರಂಟಿ’ ಎಂಬ ಶಬ್ದ ಸಿಕ್ಕಾಪಟೆ ಜನಪ್ರಿಯಗೊಳ್ಳುತ್ತಿದೆ. ಆದರೆ ನೀವು ಬಿಜೆಪಿ ಕಾರ್ಯಕರ್ತರು ಈ ಗ್ಯಾರಂಟಿ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಬೇಕು. ಗ್ಯಾರಂಟಿ ಎಂದರೆ ಬೇರೆನೂ ಅಲ್ಲ, ಲಕ್ಷ, ಕೋಟಿ ರೂಪಾಯಿಗಳನ್ನು ನುಂಗಿ ಹಾಕಿದ ಭ್ರಷ್ಟಾಚಾರಕ್ಕೆ ಇರುವ ಇನ್ನೊಂದು ಹೆಸರು ಎಂಬುದರ ಅರಿವು ಮೂಡಿಸಬೇಕು. ಸ್ವಲ್ಪ ದಿನಗಳ ಹಿಂದೆ ನಡೆದ ಫೋಟೋ ಸೆಷನ್ಸ್​ (ಪ್ರತಿಪಕ್ಷಗಳ ಸಭೆ)ನ ಫೋಟೋಗಳನ್ನು ನೋಡಿ, ಅದರಲ್ಲಿರುವ ಒಬ್ಬೊಬ್ಬರನ್ನು ನೋಡಿದರೂ ಗೊತ್ತಾಗುತ್ತದೆ. ಅಲ್ಲಿರುವ ಪ್ರತಿಯೊಬ್ಬರೂ ಏನಿಲ್ಲವೆಂದರೂ ಸುಮಾರು 20 ಲಕ್ಷ ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾದವರೇ ಆಗಿದ್ದಾರೆ. ಕಾಂಗ್ರೆಸ್ ಪಕ್ಷವೊಂದೇ ಲಕ್ಷ ಕೋಟಿಗಳಷ್ಟು ಹಗರಣ ನಡೆಸಿದೆ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Mera Booth Sabse Majboot: ಕಾರ್ಯಕರ್ತರನ್ನು ಹೊಗಳಿ, ವಿಪಕ್ಷಗಳಿಗೆ ಕುಟುಕಿದ ಪ್ರಧಾನಿ ಮೋದಿ

ಆರ್​ಜೆಡಿ, ತೃಣಮೂಲ ಕಾಂಗ್ರೆಸ್​, ಎನ್​ಸಿಪಿ ಮತ್ತಿತರ ಪಕ್ಷಗಳ ಹಗರಣಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ‘ಈ ಪಕ್ಷಗಳೆಲ್ಲ ಜನರಿಗೆ ಬರೀ ಭ್ರಷ್ಟಾಚಾರದ ಭರವಸೆಗಳನ್ನು ಮಾತ್ರ ನೀಡಿವೆ. ಇವರು ಮಾಡಿರುವ ಮೋಸವನ್ನು ಜನರಿಗೆ ತಿಳಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು’ ಎಂದೂ ತಿಳಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಲು ಯೋಜನೆ ರೂಪಿಸಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್​ಸಿಪಿ, ಆಪ್​, ಜೆಡಿಯು, ಆರ್​ಜೆಡಿ, ಸಮಾಜವಾದಿ ಪಕ್ಷ ಸೇರಿ ಒಟ್ಟು 17 ಪ್ರತಿಪಕ್ಷಗಳು ಜೂ.23ರಂದು ಬಿಹಾರದ ಪಾಟ್ನಾದಲ್ಲಿರುವ ಸಿಎಂ ನಿತೀಶ್ ಕುಮಾರ್ ನಿವಾಸದಲ್ಲಿ ಸಭೆ ನಡೆಸಿದ್ದವು. ಈ ಸಭೆಯನ್ನು ಒಂದು ಫೋಟೋ ಸೆಷನ್​ ಎಂದು ಗೃಹ ಸಚಿವ ಅಮಿತ್ ಶಾ ಕರೆದಿದ್ದರು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಹಾಗೇ ಹೇಳಿದ್ದಾರೆ.

Exit mobile version