ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 133ನೇ ಜಯಂತಿಗೆ (Nehru Birth Anniversary) ಶುಭಾಶಯ ಕೋರಿ, ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೆಹರು ಅವರ ಸ್ಮಾರಕ ಇರುವ ಶಾಂತಿವನಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ನೆಹರು ಅವರು ನೀಡಿದ ಕೊಡುಗೆಯನ್ನು ದೇಶವು ಸ್ಮರಿಸುತ್ತದೆ. ಆಧುನಿಕ ಭಾರತದ ಅಭಿವೃದ್ಧಿಯಲ್ಲಿ ನೆಹರು ಪಾತ್ರ ಅಗಾಧವಾದ್ದು ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಜತೆಗೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಪುಷ್ಪ ನಮನ ಸಲ್ಲಿಸುತ್ತಿರುವ ಫೋಟೋಗಳನ್ನು ಷೇರ್ ಮಾಡಿದೆ.
ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, ಪಕ್ಷವು ನೆಹರು ಅವರ ‘ಸೋಷಿಯಲ್ ಡೆಮಾಕ್ರಟ್ ಆಗಿ ಪ್ರೀತಿಯ ಪರಂಪರೆ’ಯನ್ನು ಮುಂದುವರಿಸಿಕೊಂಡು ಬರುತ್ತಿದೆ. ಭಾರತದ ಮೊದಲ ಪ್ರಧಾನಿ, ಪಂಡಿತ ನೆಹರು ಅವರು ಕಲ್ಯಾಣ ರಾಜ್ಯವನ್ನು ಅಪೇಕ್ಷಿಸಿದ ಸಾಮಾಜಿಕ ಪ್ರಜಾಪ್ರಭುತ್ವವಾದಿಯಾಗಿದ್ದರು. ಅವರು ಕೃಷಿ ಮತ್ತು ವಿಜ್ಞಾನ ಸೇರಿದಂತೆ ಎಲ್ಲಾ ರಂಗಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿಯನ್ನು ಬಯಸಿದ ಮಾನವತಾವಾದಿ- ಜಾತ್ಯತೀತವಾದಿಯಾಗಿದ್ದರು. ಇಂದು ಅವರ ಜನ್ಮದಿನದಂದು ನಾವು ಅವರ ಪ್ರೀತಿಯ ಪರಂಪರೆಯನ್ನು ಆಚರಿಸುತ್ತಿದ್ದೇವೆ ಎಂದು ತಿಳಿಸಿದೆ.
ಪ್ರಧಾನಿ ಮೋದಿ ಹೊರತಾಗಿ, ಜೆಡಿಎಸ್ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ನೆಹರು ಅವರ ಜನ್ಮದಿನಕ್ಕೆ ಶುಭಾಶಯ ಕೋರಿ, ಅವರ ದೂರದೃಷ್ಟಿ ಮತ್ತು ಪ್ರೇರಣೆಯನ್ನು ಕೊಂಡಾಡಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ನೆಹರು ಅವರಿಗೆ ಅವರ ಜನ್ಮದಿನದಂದು ನಮನ ಸಲ್ಲಿಸಿದ್ದಾರೆ.
ಮಕ್ಕಳ ಪ್ರೀತಿಯ ಚಾಚಾ ನೆಹರು ಆಗಿದ್ದ ಪಂಡಿತ ಜವಾಹರ್ ಲಾಲ್ ನೆಹರು ಅವರ ಜನ್ಮದಿನ(ನವೆಂಬರ್ 14)ವನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಅಗತ್ಯಗಳ ಕುರಿತು ದೇಶಾದ್ಯಂತ ಚಿಂತನ-ಮಂಥನಗಳು ನಡೆಯುತ್ತವೆ.
ಇದನ್ನು ಓದಿ | Independence day | ಬಿಜೆಪಿಗೆ ಕೌಂಟರ್: ಕಾಂಗ್ರೆಸ್‌ನ ಸ್ವಾತಂತ್ರ್ಯ ಸಂಭ್ರಮದಲ್ಲಿ ಮಿಂಚಿದ ನೆಹರು ಪವರ್