ಶಿಮ್ಲಾ: ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರಕ್ಕಾಗಿ ಅಲ್ಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಕಂಗ್ರಾ ಜಿಲ್ಲೆಯಲ್ಲಿ, ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ತಮ್ಮ ಬೆಂಗಾವಲು ವಾಹನ ನಿಲ್ಲಿಸಿದ ಘಟನೆ ನಡೆದಿದೆ. ಆದರೆ ಇದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ. ಇದು ಫೋಟೋ-ವಿಡಿಯೊ ಮತ್ತು ಪ್ರಚಾರಕ್ಕಾಗಿ ಪ್ರಧಾನಮಂತ್ರಿ ಕಚೇರಿಯಿಂದ ಪೂರ್ವ ಯೋಜಿತವಾದ ಸನ್ನಿವೇಶ ಎಂದು ಹೇಳಿವೆ.
ಕಂಗ್ರಾದ ಚಂಬಿ ಎಂಬ ಗ್ರಾಮದಲ್ಲಿ ಪ್ರಧಾನಿ ಮೋದಿ ಇದ್ದ ವಾಹನ, ಬೆಂಗಾವಲು ವಾಹನಗಳು ಪ್ರಯಾಣ ಮಾಡುತ್ತಿದ್ದವು. ಆಗೊಂದು ಆಂಬ್ಯುಲೆನ್ಸ್ ಆ ದಾರಿಯಲ್ಲಿ ಬಂತು. ಆಗ ಅಲ್ಲಿ ನೆರೆದಿದ್ದ ಜನರೆಲ್ಲ ರಸ್ತೆ ಪಕ್ಕ ಸರಿದು ದಾರಿ ಮಾಡಿಕೊಟ್ಟರು. ಅಂತೆಯೇ ಪ್ರಧಾನಿ ಮೋದಿಯೂ ತಮ್ಮ ಬೆಂಗಾವಲು ಪಡೆಗಳಿಗೆ ವಾಹನಗಳನ್ನು ನಿಲ್ಲಿಸಿ, ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ಸೂಚಿಸಿದ್ದಾರೆ. ಆ ವಿಡಿಯೊ ಕೂಡ ವೈರಲ್ ಆಗಿದೆ.
ಕೇಂದ್ರ ಸಚಿವರ ಪಿಯುಷ್ ಗೋಯೆಲ್, ಗುಜರಾತ್ ಸಚಿವ ಪೂರ್ಣೇಶ್ ಮೋದಿ ಇತರರು ಈ ವಿಡಿಯೊ ಶೇರ್ ಮಾಡಿಕೊಂಡು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ಇವರು ಜನಸ್ನೇಹಿ ಪ್ರಧಾನಮಂತ್ರಿ. ಸ್ಫೂರ್ತಿದಾಯಕ ನಡೆ, ನಮ್ಮ ಪ್ರಧಾನಿ, ನಮ್ಮ ಹೆಮ್ಮೆ ಎಂದೆಲ್ಲ ಹೊಗಳಿದ್ದಾರೆ.
ಹಾಗಿದ್ದಾಗ್ಯೂ ಟಿಆರ್ಎಸ್ ನಾಯಕ ವೈ. ಸತೀಶ್ ರೆಡ್ಡಿ ಈ ವಿಡಿಯೊವನ್ನು ವ್ಯಂಗ್ಯ ಮಾಡಿದ್ದಾರೆ. ‘ಆಂಬ್ಯುಲೆನ್ಸ್ ಸಡನ್ ಆಗಿ ಆ ದಾರಿಯಲ್ಲಿ ಪಾಸ್ ಆಗುವುದನ್ನು ಚಿತ್ರೀಕರಿಸಲು ಕ್ಯಾಮರಾ ಸಿಬ್ಬಂದಿಗೆ ಮೊದಲೇ ತಿಳಿಸಲಾಗಿತ್ತು. ಹಾಗೇ, ಬೆಂಗಾವಲು ವಾಹನಗಳನ್ನು ವಿವಿಧ ಆಯಾಮಗಳಲ್ಲಿ ಚಿತ್ರೀಕರಿಸಲಾಗಿದೆ. ಒಟ್ಟಾರೆ ಪ್ರಚಾರಕ್ಕಾಗಿ ಮಾಡಿದ ಒಂದು ಗಿಮಿಕ್’ ಎಂದು ಹೇಳಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತ್ಗೆ ಮೋದಿ ಹೋಗಿದ್ದಾಗಲೂ ಇಂಥದ್ದೇ ಸನ್ನಿವೇಶ ಎದುರಾಗಿತ್ತು. ಆಗಲೂ ಆಂಬ್ಯುಲೆನ್ಸ್ಗಾಗಿ ಪ್ರಧಾನಿ ಮೋದಿ ತಮ್ಮ ಕಾರು ನಿಲ್ಲಿಸಿದ್ದರು.
ಇದನ್ನೂ ಓದಿ: Viral Video | ಆಂಬ್ಯುಲೆನ್ಸ್ಗೆ ದಾರಿ ಬಿಡಲು, ತಮ್ಮ ಕಾರನ್ನು ರಸ್ತೆ ಪಕ್ಕ ನಿಲ್ಲಿಸಲು ಹೇಳಿದ ಪ್ರಧಾನಿ ಮೋದಿ