ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರ 100ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
ಗುಜರಾತಿನ ಗಾಂಧಿನಗರದಲ್ಲಿರುವ ಹೀರಾಬೆನ್ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿ ಅವರು, ಅಮ್ಮನ ಪಾದಪೂಜೆ ನೆರವೇರಿಸಿದರು. ವಡಾನಗರದ ಹಕ್ತೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಯೂ ನಡೆಯಲಿದೆ.
ವಡೋದರಾದಲ್ಲಿ ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ವಿತರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 4 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯ ನೂರನೇ ಜನ್ಮ ದಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ, ಅಮ್ಮನ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ. ʼಅಮ್ಮ ಎಂದರೆ ಕೇವಲ ನಿಘಂಟಿವನಲ್ಲಿರುವ ಪದವಲ್ಲ. ಅದು ಹೃದಯಸ್ಪರ್ಶಿ ಭಾವನೆಗಳನ್ನು ಒಳಗೊಂಡಿದೆ. ಜಗತ್ತಿನೆಲ್ಲೆಡೆ ಗಡಿ, ಭಾಷೆಯನ್ನು ಮೀರಿ ಎಲ್ಲರೂ ಅಮ್ಮ ಎಂದರೆ ಎಲ್ಲಕ್ಕಿಂತ ಮಿಗಿಲು. ತಾಯಿಯ ವಾತ್ಸಲ್ಯಕ್ಕೆ ಸರಿಸಾಟಿ ಬೇರಿಲ್ಲ. ತಾಯಿ ಮಕ್ಕಳಿಗೆ ಜನ್ಮ ನೀಡುವುದಲ್ಲದೆ, ಅವರ ಜೀವನವನ್ನು ಮತ್ತು ವ್ಯಕ್ತಿತ್ವವನ್ನು ರೂಪಿಸುವ ಮಹಾತಾಯಿ. ಅಮ್ಮನ ತ್ಯಾಗದ ಫಲವಾಗಿ ಮಕ್ಕಳು ಬೆಳೆಯುತ್ತಾರೆʼ ಎಂದು ಮೋದಿ ತಮ್ಮ ಭಾವನೆಗಳನ್ನು ಹೊರ ಹಾಕಿದ್ದಾರೆ.
ʼಇವತ್ತು ನನ್ನ ತಾಯಿ ತಮ್ಮ 100ನೇ ಜನ್ಮದಿನವನ್ನು ಪ್ರವೇಶಿಸುತ್ತಿದ್ದಾರೆ. ಇಂದು ನನ್ನ ತಂದೆ ಇರುತ್ತಿದ್ದರೆ ಅವರೂ ಕಳೆದ ವಾರ ತಮ್ಮ ನೂರನೇ ಹುಟ್ಟುಹಬ್ಬ ಆಚರಿಸುತ್ತಿದ್ದರು. ನನ್ನ ತಾಯಿಯ ಬಾಲ್ಯ ಕಡು ಕಷ್ಟದಲ್ಲಿತ್ತು. ಆದರೆ ಅವರು ದೇವರನ್ನು ನಂಬಿ ಮಕ್ಕಳನ್ನು ಪ್ರೀತಿಯಿಂದ ಸಲಹಿದರುʼ ಎಂದು ಮೋದಿ ವಿವರಿಸಿದ್ದಾರೆ.