Site icon Vistara News

Ajit Pawar: ಮೋದಿಯಿಂದ ದೇಶದ ಏಳಿಗೆ; ಶಿಂಧೆ ಸರ್ಕಾರ ಸೇರಿದ ಬೆನ್ನಲ್ಲೇ ಅಜಿತ್‌ ಹೇಳಿಕೆ; ಈಗ NCP VS NCP

Ajit Pawar Praises Modi

PM Modi taking India ahead; Ajit Pawar explains why he joined Shinde-Fadnavis Government

ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ (Ajit Pawar) ಅವರು ಶಿವಸೇನೆ ಹಾಗೂ ಬಿಜೆಪಿ ನೇತೃತ್ವದ ಸರ್ಕಾರದ ಜತೆ ಕೈಜೋಡಿಸಿದ್ದಾರೆ. ಅಜಿತ್‌ ಪವಾರ್‌ ಡಿಸಿಎಂ ಆಗಿ, ಒಂಬತ್ತು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದ ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಪ್ರಹಸನ ಶುರುವಾಗಿದೆ. ಹೀಗೆ, ಶರದ್‌ ಪವಾರ್‌ ಅವರಿಗೆ ಕೈಕೊಟ್ಟು, ಏಕನಾಥ್‌ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್‌ ಸರ್ಕಾರ ಸೇರಿರುವ ಅಜಿತ್‌ ಪವಾರ್‌ ಅವರು ಪ್ರಧಾನಿ ನರೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉಚ್ಛ್ರಾಯ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಎನ್‌ಸಿಪಿಯು ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳಬಹುದು ಎಂದಾದರೆ, ಎನ್‌ಸಿಪಿ ಏಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬಾರದು? ರಾಜ್ಯದ ಅಭಿವೃದ್ಧಿಯೊಂದನ್ನೇ ಗಮನದಲ್ಲಿಟ್ಟುಕೊಂಡು ಶಿವಸೇನೆ-ಬಿಜೆಪಿ ಸರ್ಕಾರ ಸೇರಿದ್ದೇನೆ” ಎಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಎನ್‌ಸಿಪಿ ವರ್ಸಸ್‌ ಎನ್‌ಸಿಪಿ

ಅಜಿತ್‌ ಪವಾರ್‌ ಅವರು ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸರ್ಕಾರದ ಜತೆ ಕೈಜೋಡಿಸಿದ ಬೆನ್ನಲ್ಲೇ ಎನ್‌ಸಿಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಅಲ್ಲದೆ ಈಗ, ಎನ್‌ಸಿಪಿ ವರ್ಸಸ್‌ ಎನ್‌ಸಿಪಿ ಎಂಬಂತಾಗಿದೆ. ಅಜಿತ್‌ ಪವಾರ್‌ ಬಣವು ಹೆಚ್ಚು ಶಾಸಕರನ್ನು ಹೊಂದಿದೆ ಎಂದು ಬಿಜೆಪಿ ಹೇಳಿದೆ. ನನಗೆ ಈ ಬೆಳವಣಿಗೆ ಬಗ್ಗೆ ಮೊದಲೇ ಏನೂ ಗೊತ್ತಿರಲಿಲ್ಲ ಎಂದು ಶರದ್‌ ಪವಾರ್‌ ಹೇಳಿದ್ದಾರೆ. ಮತ್ತೊಂದೆಡೆ, ಅಜಿತ್‌ ಪವಾರ್‌ ತೀರ್ಮಾನಕ್ಕೆ ಇತ್ತೀಚೆಗಷ್ಟೇ ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಪ್ರಫುಲ್‌ ಪಟೇಲ್‌ ಬೆಂಬಲವಿದೆ ಎನ್ನಲಾಗುತ್ತಿದೆ. ಹಾಗಾಗಿ, ಎನ್‌ಸಿಪಿ ಈಗ ಒಡೆದ ಮನೆಯಂತಾಗಿದೆ.

ಇದನ್ನೂ ಓದಿ: Maharashtra Politics: ಶರದ್‌ ಪವಾರ್‌ ಪವರ್‌ ಕಸಿದ ಅಜಿತ್;‌ ಬಿಜೆಪಿಯಿಂದ ವರ್ಷದಲ್ಲಿ 2 ಪ್ರತಿಪಕ್ಷಗಳ ಆಪೋಷನ

ಮೋದಿಯತ್ತ ಬೆರಳು ತೋರಿಸಿದ ಶರದ್‌ ಪವಾರ್‌

ಅಜಿತ್‌ ಪವಾರ್‌ ಅವರು ಶಿಂಧೆ-ಫಡ್ನವಿಸ್‌ ಮೈತ್ರಿ ಸರ್ಕಾರದ ಜತೆ ಕೈಜೋಡಿಸಿದ ಬೆನಲ್ಲೇ ಶರದ್‌ ಪವಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರತ್ತ ಬೆರಳು ತೋರಿಸಿದ್ದಾರೆ. “ಎರಡು ದಿನಗಳ ಹಿಂದಷ್ಟೇ ಮೋದಿ ಅವರು ಎನ್‌ಸಿಪಿ ಬಗ್ಗೆ ಎರಡು ವಿಷಯ ಪ್ರಸ್ತಾಪಿಸಿದ್ದರು. ಎನ್‌ಸಿಪಿ ಅವಸಾನಗೊಂಡಿರುವ ಪಕ್ಷ ಎಂದಿದ್ದರು. ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈಗ ಎನ್‌ಸಿಪಿಯ ಹಲವು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಖುಷಿ ತಂದಿದೆ. ಮೋದಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ” ಎಂದು ಶರದ್‌ ಪವಾರ್‌ ಮಾರ್ಮಿಕವಾಗಿ ಹೇಳಿದ್ದಾರೆ. ಹಾಗೆಯೇ, ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವೆ ಎಂದಿದ್ದಾರೆ.

Exit mobile version