ಶಾಂಘೈ ಸಹಕಾರ ಒಕ್ಕೂಟದ (SCO Summit) ಈ ಬಾರಿಯ ಶೃಂಗದ ಆತಿಥ್ಯವನ್ನು ಭಾರತ ವಹಿಸಿದೆ. ಅದರ ಪೂರ್ವಭಾವಿಯಾಗಿ ಈ ಒಕ್ಕೂಟದ ಭಾಗವಾಗಿರುವ ದೇಶಗಳ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಲಾಗುತ್ತಿದೆ. ಈ ಪೂರ್ವಭಾವಿ ಸಭೆಗಳನ್ನು ಭಾರತವೇ ಆಯೋಜಿಸುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರು ವರ್ಚ್ಯುವಲ್ ಆಗಿ, ಎಸ್ಇಒ ಒಕ್ಕೂಟದ ದೇಶಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ಕಿರ್ಗಿಸ್ತಾನ್ ದೇಶಗಳ ಅಧ್ಯಕ್ಷರು ಪಾಲ್ಗೊಂಡಿದ್ದರು.
ಈ ಎಸ್ಸಿಒ (ಶಾಂಘೈ ಒಕ್ಕೂಟ) ಸಭೆಯಲ್ಲಿ ಪ್ರಧಾನಿ ಮೋದಿಯವರು ಭಯೋತ್ಪಾದನೆ ವಿರುದ್ಧ ಕಟುವಾಗಿ ಮಾತನಾಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಎದುರೇ ಆ ದೇಶವನ್ನು ಭಯೋತ್ಪಾದಕರ ಸ್ವರ್ಗ ಎಂದು ಕರೆದಿದ್ದಾರೆ. ‘ಭಯೋತ್ಪಾದನೆಯು ಜಾಗತಿಕ ಮತ್ತು ಪ್ರಾದೇಶಕ ಶಾಂತಿಗೆ ಗಂಭೀರ ಸ್ವರೂಪದ ಅಪಾಯ ತಂದೊಡ್ಡಿದೆ. ನಾವು ಉಗ್ರತ್ವದ ವಿರುದ್ಧ ಹೋರಾಡಲೇಬೇಕು. ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಮ್ಮ ನೀತಿ ರಚನೆಯ ಉಪಕರಣವನ್ನಾಗಿ ಬಳಸಿಕೊಳ್ಳುತ್ತಿವೆ. ತಮ್ಮ ಲಾಭಕ್ಕಾಗಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿವೆ. ಎಸ್ಸಿಒ ಒಕ್ಕೂಟದ ದೇಶಗಳು ಇದನ್ನು ಉಗ್ರವಾಗಿ ಖಂಡಿಸಬೇಕು. ಭಯೋತ್ಪಾದಕರ ತಾಣವಾದ ದೇಶಗಳನ್ನು ಟೀಕಿಸಲು ಎಸ್ಸಿಒ ಒಕ್ಕೂಟದ ರಾಷ್ಟ್ರಗಳು ಯಾವುದೇ ಮುಜುಗರ, ಹಿಂಜರಿಕೆ ಇಟ್ಟುಕೊಳ್ಳಬಾರದು. ಭಯೋತ್ಪಾದನೆ ವಿಚಾರದಲ್ಲಿ ಯಾರೂ ಇಬ್ಭಗೆಯ ನೀತಿ ಅನುಸರಿಸಬಾರದು’ ಎಂದು ಹೇಳಿದರು.
ಇದನ್ನೂ ಓದಿ: SCO Meeting: ಪಾಕಿಸ್ತಾನ ಸಚಿವನಿಗೆ ಕೈ ಕುಲುಕದ ಭಾರತದ ವಿದೇಶಾಂಗ ಇಲಾಖೆ ಸಚಿವ; ಭಯೋತ್ಪಾದನೆ ವಿರುದ್ಧ ಕಟು ಮಾತು
ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ ‘ನಾವು ಶಾಂಘೈ ಒಕ್ಕೂಟದ ದೇಶಗಳನ್ನು ಕೇವಲ ನೆರೆಹೊರೆಯ ದೇಶಗಳೆಂದು ಭಾವಿಸಬಾರದು. ನಾವೆಲ್ಲ ಒಂದೇ ಕುಟುಂಬದಂತೆ ಇರಬೇಕು. ಭದ್ರತೆ, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಒಗ್ಗಟ್ಟು, ಪರಸ್ಪರ ರಾಷ್ಟ್ರಗಳ ಸಾರ್ವಭೌಮತ್ವದೆಡೆಗೆ ಗೌರವ, ಪ್ರಾದೇಶಿಕ ಸಮಗ್ರತೆ, ಪರಿಸರ ರಕ್ಷಣೆ ನಮ್ಮ ಎಸ್ಸಿಒದ ಆಧಾರ ಸ್ತಂಭಗಳಾಗಬೇಕು’ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಉಲ್ಲೇಖ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಬಗ್ಗೆ ಪ್ರಧಾನಿ ಮೋದಿ ಈ ಎಸ್ಸಿಒ ಸಭೆಯಲ್ಲಿ ಉಲ್ಲೇಖ ಮಾಡಿದರು. ‘ನೆರೆ ರಾಷ್ಟ್ರ ಅಫ್ಘಾನಿಸ್ತಾನದಲ್ಲಿ ಉಂಟಾದ ಪರಿಸ್ಥಿತಿ ನಮ್ಮೆಲ್ಲ ರಾಷ್ಟ್ರಗಳ ಭದ್ರತೆ ಮೇಲೆ ಪ್ರಭಾವ ಬೀರಿದೆ. ಅಫ್ಘಾನಿಸ್ತಾನದ ಜನರ ಕಲ್ಯಾಣ, ಅವರ ಒಳ್ಳೆಯ ಬಾಳ್ವೆಗಾಗಿ ನಾವೆಲ್ಲ ಒಟ್ಟಾಗಿ ಪ್ರಯತ್ನ ಮಾಡಬೇಕು. ನೆರೆ ರಾಷ್ಟ್ರಗಳಲ್ಲಿ ಅಶಾಂತಿ ಹುಟ್ಟುಹಾಕಲು, ಭಯೋತ್ಪಾದಕ ಸಿದ್ಧಾಂತಗಳನ್ನು ಪಸರಿಸಲು ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳದಂತೆ ನಾವು ತಡೆಯಬೇಕು’ ಎಂದೂ ಹೇಳಿದ್ದಾರೆ.