Site icon Vistara News

Ram Mandir: ರಾಮನನ್ನು ಹೊತ್ತು ತಂದು ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ ಮೋದಿ!

Narendra Modi

PM Modi To Carry Ram Lalla Idol From Makeshift Temple To New Ayodhya Mandir?

ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗುತ್ತಿದೆ. ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಯಾಗಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಇನ್ನು, ಇದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರೇ ತಾತ್ಕಾಲಿಕವಾಗಿ ನಿರ್ಮಿಸಿರುವ ದೇವಾಲಯದಿಂದ ರಾಮಮಂದಿರದವರೆಗೆ ರಾಮಲಲ್ಲಾ ಮೂರ್ತಿಯನ್ನು ಹೊತ್ತು ತಂದು, ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಶಿಷ್ಟಾಚಾರಕ್ಕೂ ವಿದಾಯ ಹೇಳಲಿರುವ ಮೋದಿ

ಪ್ರಧಾನಿ ನರೇಂದ್ರ ಮOದಿ ಅವರು ರಾಮಮಂದಿರಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ವೇಳೆ ಶಿಷ್ಟಾಚಾರಕ್ಕೂ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ. ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಹಾಗೂ ಪೂಜೆ ನಡೆಯುವ ಜಾಗಕ್ಕೆ ಮೋದಿ ಅವರು 500 ಮೀಟರ್‌ ದೂರದಿಂದ ನಡೆದುಕೊಂಡು ಬರಲಿದ್ದಾರೆ. ಜನವರಿ 22ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ಪೂಜೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭರದಿಂದ ನಡೆಯುತ್ತಿರುವ ಕಾಮಗಾರಿ

ಚಿನ್ನಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. “ಚಿನ್ನಲೇಪಿತ ಅಮೃತಶಿಲೆಯ ಸಿಂಹಾಸನವು 8 ಅಡಿ ಎತ್ತರ, 3 ಅಡಿ ಎತ್ತರ ಹಾಗೂ 4 ಅಡಿ ಅಗಲ ಇರಲಿದೆ. ಇದನ್ನು ರಾಜಸ್ಥಾನದ ಕಲಾವಿದರೊಬ್ಬರು ವಿನ್ಯಾಸ ಮಾಡಿದ್ದಾರೆ. ಡಿಸೆಂಬರ್‌ 15ರಂದು ಚಿನ್ನಲೇಪಿತ ಸಿಂಹಾಸನವು ಅಯೋಧ್ಯೆ ತಲುಪಲಿದೆ. ಈಗಾಗಲೇ ಮಂದಿರದ ಗರ್ಭಗುಡಿ ನಿರ್ಮಾಣ ಪೂರ್ಣಗೊಂಡಿದೆ. ಡಿಸೆಂಬರ್‌ 15ರ ವೇಳೆಗೆ ನೆಲಮಹಡಿ ಪೂರ್ಣಗೊಳ್ಳಲಿದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸದಸ್ಯ ಅನಿಲ್‌ ಮಿಶ್ರಾ ಮಾಹಿತಿ ನೀಡಿದ್ದಾರೆ.

ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ವೇಳೆ ಮೋದಿ ಅವರಿಂದ ಪೂಜೆ.

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version