ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಾಗಿರುವ ಭವ್ಯ ಸಂಸತ್ ಭವನಕ್ಕೆ (New Parliament Building) ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನವಾದ ಮೇ 28ರಂದು ಚಾಲನೆ ನೀಡಲಿದ್ದಾರೆ. ನೂತನ ಸಂಸತ್ ಭವನಕ್ಕೆ ಚಾಲನೆ ನೀಡುವ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಾಹಿತಿ ನೀಡಿದ್ದಾರೆ. ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಪಕ್ಷಗಳ ನಾಯಕರು, ಸಂಸದರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸ್ಪೀಕರ್ ಓಂ ಬಿರ್ಲಾ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನೂತನ ಸಂಸತ್ ಭವನದ ಉದ್ಘಾಟನೆಗೆ ಆಹ್ವಾನ ನೀಡಲಿದ್ದಾರೆ. “ನೂತನ ಸಂಸತ್ ಭವನವು ಆತ್ಮನಿರ್ಭರ ಭಾರತ ಕಲ್ಪನೆಯ ಸಾಕಾರವಾಗಿದೆ” ಎಂದು ಸರ್ಕಾರ ಪ್ರಕಟಣೆ ತಿಳಿಸಿದೆ. ಇನ್ನು ವೀರ ಸಾವರ್ಕರ್ ಅವರ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಆಗಾಗ ಟೀಕೆ, ವಾಗ್ವಾದ ನಡೆಯುತ್ತಿರುವ ಬೆನ್ನಲ್ಲೇ, ಸಾವರ್ಕರ್ ಜಯಂತಿಯಂದೇ ಸಂಸತ್ ಭವನದ ಉದ್ಘಾಟನೆಗೆ ತೀರ್ಮಾನಿಸಲಾಗಿದೆ.
ಹೇಗಿದೆ ನೂತನ ಸಂಸತ್ ಭವನ?
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ನೂತನ ಸಂಸತ್ ಕಟ್ಟಡ ನಿರ್ಮಿಸಲಾಗಿದೆ. ಈ ನೂತನ ಕಟ್ಟಡ 65 ಸಾವಿರ ಚದರ ಮೀಟರ್ ಪ್ರದೇಶಕ್ಕೆ ವ್ಯಾಪಿಸಿದೆ. ಲೋಕಸಭೆ ಮತ್ತು ರಾಜ್ಯ ಸಭೆ ಕಾರ್ಯ-ಕಲಾಪಗಳಿಗಾಗಿ ಎರಡು ದೊಡ್ಡ-ವಿಶಾಲವಾದ ಸಭಾಂಗಣಗಳನ್ನು ಹೊಂದಿದೆ. ಒಂದು ಗ್ರಂಥಾಲಯ, ಸಂಸದರ ಕಚೇರಿಗಳು, ಸಭೆಗಳಿಗಾಗಿ ಸಮಿತಿ ರೂಮ್ಗಳು ಮತ್ತಿತರ ಸೌಕರ್ಯಗಳನ್ನು ಹೊಂದಿರಲಿದೆ. ಲೋಕಸಭೆ ಕಲಾಪ ನಡೆಯುವ ಹಾಲ್ಗಳಲ್ಲಿ 888 ಸಂಸದರು ಮತ್ತು ರಾಜ್ಯ ಸಭೆ ಕಲಾಪ ನಡೆಯುವಲ್ಲಿ 384 ಸಂಸದರು ಕುಳಿತುಕೊಳ್ಳಬಹುದಾಗಿದೆ. ಅಂದಹಾಗೆ, ಲೋಕಸಭೆ ಹಾಲ್ಅನ್ನು ರಾಷ್ಟ್ರಪಕ್ಷಿ ನವಿಲು ಮತ್ತು ರಾಜ್ಯಸಭೆಯನ್ನು ಕಮಲದ ಹೂವಿನ ಥೀಮ್ನಲ್ಲಿ ನಿರ್ಮಿಸಲಾಗಿದೆ.
ಇದನ್ನೂ ಓದಿ: PM Rozgar Mela: ಗ್ರೂಪ್ ಸಿ, ಡಿ ಹುದ್ದೆಗಳ ಸಂದರ್ಶನ ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ: ನರೇಂದ್ರ ಮೋದಿ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನಕ್ಕೆ ದಿಢೀರ್ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದ್ದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಂಸತ್ ಭವನಕ್ಕೆ ಭೇಟಿ ನೀಡಿದ ಅವರು, ಒಂದು ಗಂಟೆಗೂ ಹೆಚ್ಚು ಸಮಯವನ್ನು ಅಲ್ಲಿಯೇ ಕಳೆದಿದ್ದರು. ಕಾಮಗಾರಿ ಪರಿಶೀಲನೆ ಜತೆಗೆ ನಿರ್ಮಾಣ ಕಾರ್ಮಿಕರ ಜತೆ ಮಾತುಕತೆಯನ್ನೂ ನಡೆಸಿದ್ದರು. ಸಂಸತ್ತಿನ ಉಭಯ ಸದನಗಳಿಗೆ ತೆರಳಿ ಕಾಮಗಾರಿ ಪರಿಶೀಲನೆ, ಅತ್ಯಾಧುನಿಕ ಸೌಕರ್ಯಗಳ ಕುರಿತು ಮಾಹಿತಿ ಪಡೆದಿದ್ದರು.