ನವ ದೆಹಲಿ: ಬ್ರೆಜಿಲ್ನಲ್ಲಿ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೋ ಬೆಂಬಲಿಗರು ಪ್ರಾರಂಭಿಸಿರುವ ಗಂಭೀರ ಸ್ವರೂಪದ ಪ್ರತಿಭಟನೆಯ ಬಗ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಜೈರ್ ಬೋಲ್ಸನಾರೋ ಸೋತಿದ್ದನ್ನು ಒಪ್ಪಿಕೊಳ್ಳಲಾಗದ ಅವರ ಬೆಂಬಲಿಗರು, ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅಧ್ಯಕ್ಷೀಯ ಅಧಿಕಾರಕ್ಕೆ ಏರಿದ್ದರ ವಿರುದ್ಧ ದಂಗೆ ಶುರುವಿಟ್ಟುಕೊಂಡಿದ್ದಾರೆ. ಭಾನುವಾರ ಪ್ರತಿಭಟನಾಕಾರರು ಬ್ರೆಜಿಲ್ ಸರ್ಕಾರದ ಸೂಕ್ಷ್ಮ ವಲಯಕ್ಕೇ ದಾಂಗುಡಿ ಇಟ್ಟಿದ್ದರು. ಅಧ್ಯಕ್ಷರ ಭವನ, ಸಂಸತ್ ಭವನ, ಸುಪ್ರೀಂಕೋರ್ಟ್ಗಳಿಗೆ ನುಗ್ಗಿ, ಹಾವಳಿ ಸೃಷ್ಟಿಸಿದ್ದಾರೆ.
ಬ್ರೆಜಿಲ್ನ ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ‘ಬ್ರೆಜಿಲ್ನ ಬ್ರೆಸಿಲಿಯಾದಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದು ಕಳವಳ ಮೂಡಿಸಿತು. ನಿಜಕ್ಕೂ ಇದು ಅಪಾಯಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು. ಈ ವಿಚಾರದಲ್ಲಿ ಬ್ರೆಜಿಲ್ ಸರ್ಕಾರಕ್ಕೆ ನಮ್ಮ ಬೆಂಬಲ ಸೂಚಿಸುತ್ತೇವೆ’ ಎಂದು ಹೇಳಿದ್ದಾರೆ. ಹಾಗೇ, ಬ್ರೆಜಿಲ್ ಈಗಿನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾರನ್ನು ಟ್ಯಾಗ್ ಮಾಡಿದ್ದಾರೆ.
ಬ್ರೆಜಿಲ್ ದಂಗೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಖಂಡಿಸಿದ್ದಾರೆ. ಬ್ರೆಜಿಲ್ನಲ್ಲಿ ಕಾನೂನುಬದ್ಧವಾಗಿಯೇ ಚುನಾವಣೆ ನಡೆದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಆಗಿದೆ. ಇಷ್ಟಾದ ಮೇಲೆ ಹೀಗೆ ದಂಗೆ-ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಮಾಡಿದಂತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Brazil Riots | ಬ್ರೆಜಿಲ್ನಲ್ಲಿ ದೊಡ್ಡ ಮಟ್ಟದ ದಂಗೆ; ಅಧ್ಯಕ್ಷರ ಭವನ, ಸುಪ್ರೀಂಕೋರ್ಟ್ಗೆ ಪ್ರತಿಭಟನಾಕಾರರ ಲಗ್ಗೆ