ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 99ನೇ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡುತ್ತಾ, ದೇಶದ ಜನತೆ ಅಂಗಾಂಗ ದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು. (Mann Ki Baat) ಇದೊಂದು ಪವಿತ್ರ ಕಾರ್ಯವಾಗಿದೆ. ಇದರಿಂದ ಅನೇಕ ಮಂದಿಯ ಜೀವ ರಕ್ಷಣೆ ಮಾಡಬಹುದು ಎಂದು ಮನವಿ ಮಾಡಿದ್ದಾರೆ.
ಭಾರಿ ಸಂಖ್ಯೆಯಲ್ಲಿ ಜನ ಅಂಗಾಗ ದಾನಿಗಳಿಗೋಸ್ಕರ ಕಾಯುತ್ತಿದ್ದಾರೆ. ಭಾರತದಲ್ಲಿ ನಿಸ್ವಾರ್ಥ ಸೇವೆಯನ್ನು ಪಾರಮಾರ್ಥಿಕ ಎಂದು ವ್ಯಾಖ್ಯಾನಿಸಲಾಗಿದೆ. ಅದು ಅಷ್ಟು ಮಹತ್ತಮ ಮತ್ತು ಪವಿತ್ರ ಕೆಲಸ. ಇತರರ ಸಂತೋಷಕ್ಕಾಗಿ ತಮ್ಮದನ್ನು ದಾನ ಮಾಡಲು ಜನತೆ ಹಿಂಜರಿಯಬಾರದು. ಅಂಗಾಂಗ ದಾನವನ್ನು ಉತ್ತೇಜಿಸಲು ದೇಶಾದ್ಯಂತ ಏಕರೂಪದ ನೀತಿಯನ್ನು ಜಾರಿಗೊಳಿಸಿದೆ. ರೋಗಿಗಳು ಯಾವುದೇ ರಾಜ್ಯದಲ್ಲಿ ಅಂಗಾಂಗ ದಾನ ಪಡೆಯಬಹುದು. ಸರ್ಕಾರವು ಅಂಗಾಗ ದಾನಕ್ಕೆ ಇದ್ದ 65 ವರ್ಷ ವಯಸ್ಸಿನ ಮಿತಿಯನ್ನು ರದ್ದುಪಡಿಸಿದೆ. 2013ರಲ್ಲಿ 5,000ಕ್ಕಿಂತ ಕಡಿಮೆ ಅಂಗಾಂಗ ದಾನ ನಡೆದಿತ್ತು. 2022ರಲ್ಲಿ 15,000ಕ್ಕೆ ಏರಿಕೆಯಾಗಿದೆ ಎಂದರು. ಮನ್ ಕಿ ಬಾತ್‌ನಲ್ಲಿ ಅವರು ಅಂಗಾಂಗ ದಾನ ನೀಡಿದವರ ಕುಟುಂಬದ ಸದಸ್ಯರ ಜತೆಗೂ ಮಾತನಾಡಿದರು.
ಜಾರ್ಖಂಡ್‌ನ ಅಭಿಜಿತ್ ಅವರ ತಾಯಿ ಬ್ರೈನ್ ಡೆತ್‌ಗೆ ಒಳಗಾದ ಸಂದರ್ಭ ಅವರ ಕುಟುಂಬವು ಅಂಗಾಂಗ ದಾನಕ್ಕೆ ನಿರ್ಧರಿಸಿತು. ಈ ಹಿಂದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ತಾಯಿ ಅವರು ಕೊನೆಯುಸಿರೆಳೆದ ಸಂದರ್ಭ ಕುಟುಂಬವು ಕೈಗೊಂಡ ನಿರ್ಣಯ ಆದರ್ಶಯುತ ಹಾಗೂ ಪವಿತ್ರ ಕಾರ್ಯ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ 99 ರನ್ ಗಳಿಸಿದಾಗ ನರ್ವಸ್ ಆಗುತ್ತದೆ. ಆದರೆ ಮನ್ ಕಿ ಬಾತ್‌ನಲ್ಲಿ ದೇಶದ ಕೋಟ್ಯಂತರ ಜನರ ಆಶಯದಿಂದ ನರ್ವಸ್ ಆಗುವುದಿಲ್ಲ. ಭಾರತದ ಜನತೆ ಈ ಕಂತನ್ನು ಬಹು ನಿರೀಕ್ಷೆಯೊಂದಿಗೆ ಆಲಿಸುತ್ತಿದ್ದಾರೆ. ಏಪ್ರಿಲ್ 30ರಂದು ನಡೆಯಲಿರುವ 100ನೇ ಕಂತನ್ನು ಅವಿಸ್ಮರಣೀಯಗೊಳಿಸೋಣ ಎಂದರು.
ಶಾರದಾ ದೇವಿ ಮಂದಿರ ನಿರ್ಮಾಣಕ್ಕೆ ಪ್ರಶಂಸೆ
ಕೆಲ ದಿನಗಳ ಹಿಂದೆ ಕಾಶ್ಮೀರದ ಕುಪ್ವಾರದಲ್ಲಿ ತಾಯಿ ಶಾರದಾ ದೇವಿಯ ಭವ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಲಾಗಿದೆ. ಈ ಶುಭ ಕಾರ್ಯಕ್ಕಾಗಿ ಜಮ್ಮು ಕಾಶ್ಮೀರದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ. ಈ ದೇವಾಲಯ ನಿರ್ಮಾಣದಲ್ಲಿ ಶೃಂಗೇರಿಯ ಶಾರದಾ ಪೀಠ ಕ್ಷೇತ್ರವು ಸಮಗ್ರ ಸಹಕಾರ ನೀಡಿದೆ.
ವೀರ ಲಾಚಿತ್ ಬರ್‌ಫುಕನ್ ಅವರ 400ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಮೊಘಲದ ಅತಿಕ್ರಮಣದಿಂದ ಗುವಾಹಟಿಯನ್ನು ರಕ್ಷಿಸಿದ ಕೀರ್ತಿ ಮಹಾನ್ ಯೋಧ ಲಾಚಿತ್ ಬರ್ ಫುಕನ್ ಅವರದ್ದಾಗಿದೆ. ಅವರ ಕುರಿತ ಲೇಖನ ಅಭಿಯಾನವೊಂದರಲ್ಲಿ 45 ಲಕ್ಷ ಮಂದಿ ಭಾಗವಹಿಸಿದ್ದರು. ಇದು ಗಿನ್ನಿಸ್ ದಾಖಲೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಏಕ್ ಭಾರತ್ ಶ್ರೇಷ್ಠ್ ಭಾರತ್ ಭಾವನೆಯು ಇಡೀ ದೇಶವನ್ನು ಒಂದುಗೂಡಿಸುತ್ತಿದೆ. ಏಪ್ರಿಲ್ 17-30ರಂದು ಗುಜರಾತ್ ನ ನಾನಾ ಕಡೆಗಳಲ್ಲಿ ಸೌರಾಷ್ಟ್ರ-ತಮಿಳು ಸಂಗಮ್ ಕಾರ್ಯಕ್ರಮ ನಡೆಯಲಿದೆ. ಗುಜರಾತ್-ತಮಿಳುನಾಡು ನಡುವಣ ಐತಿಹಾಸಿಕ ಸಂಬಂಧವನ್ನು ಇದು ಬಿಂಬಿಸಲಿದೆ.
ನಾರಿ ಶಕ್ತಿ ದೇಶದ ಪ್ರಗತಿಗೆ ನಿರ್ಣಾಯಕ: ಪ್ರಧಾನಿ ಪ್ರಶಂಸೆ
ದೇಶದ ಪ್ರಗತಿಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಕಳೆದ 75 ವರ್ಷಗಳಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಶಾಸಕಿಯರಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಭಾರತದ ವನಿತೆಯರ ತಂಡವಿದೆ. ಭಾರತದಲ್ಲಿ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಅಗಾಧ ಸಾಧನೆ ಮಾಡುತ್ತಿದ್ದಾರೆ. ನಾರಿಯರು ನಾನಾ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಮನ್ ಕಿ ಬಾತ್‌ನ ಹಲವು ಕಂತುಗಳಲ್ಲಿ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಮೋದಿಯವರು ಟ್ವೀಟ್ ಮಾಡಿದ್ದಾರೆ.
ವಾಯುಪಡೆಯಲ್ಲಿ ಯುದ್ಧ ಘಟಕದಲ್ಲಿ ಮೊದಲ ಮಹಿಳಾ ಅಧಿಕಾರಿಯಾಗಿ (ಗ್ರೂಪ್ ಕ್ಯಾಪ್ಟನ್) ಶೈಲಜಾ ಧಾಮಿ ನೇಮಕವಾಗಿದ್ದಾರೆ. ಅವರಿಗೆ 3,000 ಗಂಟೆಗಳ ವಿಮಾನ ಹಾರಾಟ ನಡೆಸಿದ ಅನುಭವ ಕೂಡ ಇದೆ. ಸಿಯಾಚಿನ್‌ನಲ್ಲಿ ಮೊದಲ ಮಹಿಳಾ ಅಧಿಕಾರಿಯಾಗಿ ಕ್ಯಾಪ್ಟನ್ ಶಿವ್ ಚೌಹಾಣ್ ನೇಮಕವಾಗಿದ್ದಾರೆ. ಏಷ್ಯಾದ ಮೊದಲ ಮಹಿಳಾ ಲೋಕೊ ಪೈಲಟ್ ಎಂಬ ಹೆಗ್ಗಳಿಕೆಗೆ ಸುರೇಖಾ ಯಾದವ್ ಪಾತ್ರರಾಗಿದ್ದಾರೆ. ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಲೋಕೊ ಪೈಲಟ್ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಕೋವಿಡ್ ಕೇಸ್ ಏರಿಕೆ ಬಗ್ಗೆ ಇರಲಿ ಎಚ್ಚರ
ದೇಶದ ಕೆಲವು ಕಡೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನತೆ ಮುಂಜಾಗರೂಕತಾ ಕ್ರಮ ವಹಿಸಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಮನವಿ ಮಾಡಿದ್ದಾರೆ.
ಭಾರತದಲ್ಲಿ ಸೂರ್ಯೋಪಾಸನೆ ಪರಂಪರೆಯಿಂದ ಬಂದಿದೆ. ಈಗ ದೇಶವಾಸಿಗಳು ಸೋಲಾರ್ ವಿದ್ಯುತ್ ಬಳಕೆಯ ಮಹತ್ವವನ್ನು ಮನಗಾಣುತ್ತಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಎಂಎಸ್ ಆರ್ ಆಲಿವ್ ಹೌಸಿಂಗ್ ಸೊಸೈಟಿಯ ನಿವಾಸಿಗಳು ಸಂಪೂರ್ಣ ಸೌರಶಕ್ತಿಯನ್ನು ಬಳಸುತ್ತಿದ್ದಾರೆ. ಇಲ್ಲಿನ ಸೋಲಾರ್ ಘಟಕದಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರತಿ ತಿಂಗಳು 40,000 ರೂ. ವಿದ್ಯುತ್ ಬಿಲ್ ಉಳಿತಾಯ ಮಾಡುತ್ತಿದ್ದಾರೆ ಎಂದು ವಿವರಿಸಿದರು.