ನವದೆಹಲಿ/ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21ರಿಂದ ಜೂನ್ 24ರವರೆಗೆ ಅಮೆರಿಕ ಪ್ರವಾಸ (PM Modi US Visit) ಕೈಗೊಳ್ಳಲಿದ್ದಾರೆ. ಭಾರತದ ಪ್ರಧಾನಿಯನ್ನು ಸ್ವಾಗತಿಸಲು ಅಮೆರಿಕ ಸಜ್ಜಾಗಿದೆ. ಇನ್ನು ಮೋದಿ ಭೇಟಿಯನ್ನು ಹಬ್ಬದಂತೆ ಆಚರಿಸಲು ಸಾವಿರಾರು ಅನಿವಾಸಿ ಭಾರತೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಹಾಗಾದರೆ, ಮೋದಿ ಅವರು ಅಮೆರಿಕ ಭೇಟಿ ಏನೆಲ್ಲ ಮಾಡಲಿದ್ದಾರೆ? ಅವರನ್ನು ಸ್ವಾಗತಿಸಲು ಸಿದ್ಧತೆ ಹೇಗೆ ನಡೆದಿದೆ? ಯಾವ ಪ್ರಮುಖ ಒಪ್ಪಂದಗಳು ನಡೆಯಲಿವೆ ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ.
ಮೋದಿ ಕಾರ್ಯಕ್ರಮದ ವೇಳಾ ಪಟ್ಟಿ
ಜೂನ್ 20ರಂದೇ ಮೋದಿ ಅವರು ಅಮೆರಿಕ ತಲುಪಲಿದ್ದಾರೆ. ಅವರಿಗೆ ಅಮೆರಿಕ ಸರ್ಕಾರದಿಂದ ಅದ್ಧೂರಿಯಾಗಿ ಸ್ವಾಗತ ದೊರೆಯಲಿದೆ. ಜೂನ್ 21ರಂದು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದಲ್ಲೇ ಯೋಗ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಅವರ ಪತ್ನಿ ಜತೆ ಭೋಜನಕೂಟದಲ್ಲಿ ಭಾಗಿ.
ಜೂನ್ 22ರಂದು ಅಮೆರಿಕ ಸಂಸತ್‌ನಲ್ಲಿ ಮೋದಿ ಭಾಷಣ. ಜೂನ್ 23ರಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜತೆ ಊಟ, ಪ್ರಮುಖ ಕಂಪನಿಗಳ ಸಿಇಒಗಳ ಜತೆ ಪ್ರಮುಖ ಸಭೆ, ಜಾಗತಿಕ ಅನಿವಾಸಿ ಭಾರತೀಯ ಸಮುದಾಯದ ಪ್ರಮುಖರ ಜತೆ ಚರ್ಚೆ ಮಾಡಲಿದ್ದಾರೆ. ಹಾಗೆಯೇ, ಸಾವಿರಾರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದು, ವಾಷಿಂಗ್ಟನ್ ಡಿಸಿಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.
ಪ್ರಮುಖ ಒಪ್ಪಂದ, ಸಂಬಂಧ ವೃದ್ಧಿಗೆ ಆದ್ಯತೆ
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಬಳಿಕ ಜಾಗತಿಕ ಆಕ್ಷೇಪದ ಮಧ್ಯೆಯೂ ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಿತು. ಅಮೆರಿಕ ಕೂಡ ಆಕ್ಷೇಪ ವ್ಯಕ್ತಪಡಿಸಿತು. ಹಾಗಾಗಿ, ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುವುದರಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಹಾಗೆಯೇ, ಪ್ರಮುಖ ಒಪ್ಪಂದಗಳು, ಹಲವು ಕ್ಷೇತ್ರಗಳ ಏಳಿಗೆಗೆ ಪ್ರಮುಖ ಆದ್ಯತೆ ನೀಡುವುದು ಮೋದಿ ಅವರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಮೋದಿ ಹಾಗೂ ಜೋ ಬೈಡೆನ್ ಮಾತುಕತೆ ವೇಳೆ ಜಿಇ ಎಫ್414 ಜೆಟ್ ಎಂಜಿನ್ ಒಪ್ಪಂದ ಆಗಲಿದೆ. ಹಾಗೆಯೇ, ಟೆಲಿಕಾಮ್, ಸೆಮಿಕಂಡಕ್ಟರ್, ನಾಗರಿಕ ಅಣ್ವಸ್ತ್ರ ಸಹಕಾರ, ವ್ಯಾಪಾರ, ಬಾಹ್ಯಾಕಾಶ, ಶಿಕ್ಷಣ, ಕೃತಕ ಬುದ್ಧಿಮತ್ತೆ, 5G, 6G ಸೇರಿ ಹತ್ತಾರು ವಿಷಯಗಳು ಚರ್ಚೆಗೆ ಬರಲಿವೆ. ಇದೇ ವೇಳೆ ಪ್ರಮುಖ ಒಪ್ಪಂದಗಳಿಗೂ ಉಭಯ ನಾಯಕರು ಸಹಿ ಹಾಕಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: PM Modi visit to US : ಅಮೆರಿಕದಲ್ಲಿ ಮೋದಿ ವಿರುದ್ಧ ಪಿತೂರಿ ಮಾಡಲು ಪಾಕಿಸ್ತಾನದ ಟೂಲ್ ಕಿಟ್ ರೆಡಿ!
ಅನಿವಾಸಿ ಭಾರತೀಯರಿಂದ ಏಕತಾ ರ‍್ಯಾಲಿ
ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ಸಜ್ಜಾಗಿದ್ದಾರೆ. ಅಲ್ಲದೆ, ಭಾನುವಾರ ಅನಿವಾಸಿ ಭಾರತೀಯರು ಏಕತಾ ರ‍್ಯಾಲಿ ಆಯೋಜಿಸುವ ಮೂಲಕ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಜೂನ್ 23ರಂದು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಸುಮಾರು ಎರಡು ಗಂಟೆ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಒಟ್ಟಿನಲ್ಲಿ ಮೋದಿ ಭೇಟಿಯು ಅದ್ಧೂರಿ ಸ್ವಾಗತ, ಕಾರ್ಯಕ್ರಮ, ಒಪ್ಪಂದ, ದ್ವಿಪಕ್ಷೀಯ ಸಂಬಂಧ ವೃದ್ಧಿ ಸೇರಿ ಹತ್ತಾರು ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ.