Site icon Vistara News

PM Modi US Visit: ಭಾರತದಿಂದ ಹೊರಟ ಪ್ರಧಾನಿ ಮೋದಿ; ಯುಎಸ್ ಜತೆಗಿನ​ ಸ್ನೇಹ ಇನ್ನಷ್ಟು ಬಲಪಡಿಸುವ ವಿಶ್ವಾಸ

PM Modi On Flight Before leave India to US

#image_title

ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಇಂದು ಅಮೆರಿಕಕ್ಕೆ (PM Modi US Visit) ಹೊರಟಿದ್ದು, ಈಗಾಗಲೇ ಭಾರತವನ್ನು ಬಿಟ್ಟಿದ್ದಾರೆ. ಅವರು ಜೂ.21ರಿಂದ 24ರವರೆಗೆ ಅಮೆರಿಕದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಅವರು ಈಜಿಪ್ಟ್​ಗೆ ತೆರಳಲಿದ್ದಾರೆ. ಇಂದು ಬೆಳಗ್ಗೆ ಅಮೆರಿಕಕ್ಕೆ ಹೊರಡುವುದಕ್ಕೂ ಮೊದಲು ಪ್ರಧಾನಿ ಮೋದಿ (PM Modi) ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ‘ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅಲ್ಲಿನ ಪ್ರಥಮ ಮಹಿಳೆ ಜಿಲ್​ ಬೈಡೆನ್​ ಆಹ್ವಾನದ ಮೇರೆಗೆ ನಾನು ಯುಎಸ್​ಗೆ ಪ್ರಯಾಣ ಮಾಡುತ್ತಿದ್ದೇನೆ. ಭಾರತ ಮತ್ತು ಯುಎಸ್ ಸಹಭಾಗಿತ್ವ ಮತ್ತು ಭಿನ್ನತೆಯ ಆಳವನ್ನು ಇನ್ನಷ್ಟು ಹೆಚ್ಚಿಸಲು ಈ ನನ್ನ ಯುಎಸ್​ ಭೇಟಿಯು ಒಂದು ಅದ್ಭುತ ಅವಕಾಶವಾಗಲಿದೆ. ಜಾಗತಿಕವಾಗಿ ಇರುವ ಸವಾಲುಗಳನ್ನು ಗೆಲ್ಲಲು ನಮ್ಮ ಎರಡೂ ದೇಶಗಳೂ ಸದಾ ಒಟ್ಟಾಗಿ, ಸದೃಢವಾಗಿ ನಿಲ್ಲುತ್ತವೆ ಎಂದು ಹೇಳಿದ್ದಾರೆ.

‘ನಾನು ಈ ಬಾರಿಯ ಜೂನ್​ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಚರಿಸಲಿದ್ದೇನೆ. ಈ ವೇಳೆ ವಿಶ್ವಸಂಸ್ಥೆಯ ಪ್ರಮುಖ ನಾಯಕರು, ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರು ಉಪಸ್ಥಿತರಿಲಿದ್ದಾರೆ‘ ಎಂದೂ ಪ್ರಧಾನಿ ಮೋದಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಯುಎಸ್ಎಯಲ್ಲಿ ನಾನು ಅಲ್ಲಿರುವ ಭಾರತೀಯ ಸಮುದಾಯದ ಜತೆ ಸಂವಾದ ನಡೆಸಲಿದ್ದೇನೆ. ಖ್ಯಾತ ಉದ್ಯಮಿಗಳನ್ನು ಭೇಟಿ ಮಾಡಿ, ಮಾತುಕತೆ ನಡೆಸಲಿದ್ದೇನೆ. ಬೇರೆಬೇರೆ ಕ್ಷೇತ್ರದ ಸಾಧಕರು/ಗಣ್ಯರ ಜತೆ ಮಾತುಕತೆ ನಡೆಸಲಿದ್ದೇನೆ. ವ್ಯಾಪಾರ, ವಾಣಿಜ್ಯ, ಸಂಶೋಧನೆ, ಟೆಕ್ನಾಲಜಿ ಸೇರಿ ಹಲವು ವಿಭಾಗಗಳಲ್ಲಿ ಭಾರತ- ಯುಎಸ್​ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ತುಂಬ ಮಹತ್ವದ್ದಾಗಿದೆ’ ಎಂದು ಹೇಳಿದ್ದಾರೆ.

ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ಮೋದಿ, ಜೂನ್‌ 22ರಂದು ಅಮೆರಿಕ ಸಂಸತ್‌ನಲ್ಲಿ ಭಾಷಣ ಮಾಡಲಿದ್ದಾರೆ. ಜೂನ್‌ 23ರಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜತೆ ಊಟ, ಪ್ರಮುಖ ಕಂಪನಿಗಳ ಸಿಇಒಗಳ ಜತೆ ಪ್ರಮುಖ ಸಭೆ, ಜಾಗತಿಕ ಅನಿವಾಸಿ ಭಾರತೀಯ ಸಮುದಾಯದ ಪ್ರಮುಖರ ಜತೆ ಚರ್ಚೆ ಮಾಡಲಿದ್ದಾರೆ. ಹಾಗೆಯೇ, ಸಾವಿರಾರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದು, ವಾಷಿಂಗ್ಟನ್‌ ಡಿಸಿಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಜೂ.24ರಂದು ಅವರು ಅಲ್ಲಿಂದ ಈಜಿಪ್ಟ್​ಗೆ ತೆರಳಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಗೆ ಕೆಲವೇ ದಿನ ಬಾಕಿ; ಮುಂಬಯಿ ದಾಳಿ ಸಂಚುಕೋರ ತಹವ್ವುರ್ ರಾಣಾ ಗಡಿಪಾರು ಮಾಡಲು ಯುಎಸ್​ ಒಪ್ಪಿಗೆ

Exit mobile version