ಮೈಸೂರು: ಬಹನಿರೀಕ್ಷಿತ ಹುಲಿ ಗಣತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಮೈಸೂರಿನಲ್ಲಿ ಅನಾವರಣ ಮಾಡಲಿದ್ದಾರೆ. ಪ್ರಾಜೆಕ್ಟ್ ಟೈಗರ್ನ ಸುವರ್ಣ ಮಹೋತ್ಸವದ (50 ವರ್ಷ) ಹಿನ್ನೆಲೆಯಲ್ಲಿ ಗಣತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿಯ ಗಣತಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೇ ನಂಬರ್ ಸ್ಥಾನ ಪಡೆಯಲಿದೆ ಎನ್ನಲಾಗಿದೆ.
ಮಾರ್ಚ್ 25ರಂದು ದಾವಣಗೆರೆಯಲ್ಲಿ ನಡೆದ ರ್‍ಯಾಲಿ ವೇಳೆ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ನಲ್ಲಿ ಹುಲಿ ಗಣತಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದೇ ವೇಳೆ ಅವರು ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕ ಮುಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಪ್ರಕಾರ ಈ ಬಾರಿ ಹುಲಿ ಗಣತಿಯಲ್ಲಿ ಮೊದಲ ಸ್ಥಾನ ಪಡೆಯಲು ಕರ್ನಾಟಕ ಮತ್ತು ಮಧ್ಯ ಪ್ರದೇಶದ ನಡುವೆ ಪೈಪೋಟಿಯಿದೆ. ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾಗಿದೆ. ಹೊಸ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು 550ರಿಂದ 600 ಹುಲಿಗಳು ಇರುವ ಸಾಧ್ಯತೆಗಳಿವೆ ಎಂದು ಎನ್ಟಿಸಿಎ ಮೂಲಗಳು ತಿಳಿಸಿವೆ.
2018ರಲ್ಲಿ ಬಿಡುಗಡೆಯಾಗಿರುವ ಹುಲಿ ಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 2,967 ಹುಲಿಗಳಿದ್ದವು. ಆ ವೇಳೆ ಮಧ್ಯ ಪ್ರದೇಶ 526 ಹುಲಿಗಳನ್ನು ಹೊಂದುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. 524 ಹುಲಿಗಳಿದ್ದ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿತ್ತು. ಪಶ್ಚಿಮ ಘಟ್ಟಗಳು ಹುಲಿಗಳ ಬೆಳವಣಿಗೆಗೆ ಪೂರಕವಾಗಿದ್ದ ಕಾರಣ ಒಟ್ಟು 981 ಹುಲಿಗಳಿದ್ದವು. ಕೇಂದ್ರ ಹಾಗೂ ಪೂರ್ವ ಘಟ್ಟಗಳು 1,033 ಹುಲಿಗಳಿಗೆ ತಾಣವಾಗಿದ್ದವು.
ಏನಿದು ಪ್ರಾಜೆಕ್ಟ್ ಟೈಗರ್?
ಪ್ರಾಜೆಕ್ಟ್ ಟೈಗರ್ 1973ರಲ್ಲಿ ಆರಂಭಗೊಂಡಿತ್ತು. ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1973ರಲ್ಲಿ ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ಹುಲಿ ಬೇಟೆಯ ಪ್ರಕರಣಗಳು ಹೆಚ್ಚಾದ ಕಾರಣ ಹುಲಿಗಳ ಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಕಡಿಮೆಯಾಗಿತ್ತು. ಹೀಗಾಗಿ ಪ್ರಾಜೆಕ್ಟ್ ಟೈಗರ್ ಮೂಲಕ ಹುಲಿ ಸಂರಕ್ಷಣೆ ಆರಂಭಿಸಲಾಯಿತು. ವನ್ಯ ಜೀವಿ ಸಂರಕ್ಷಣಾ ಕಾಯ್ಕೆ 1972ರ ಅಡಿ ಗರಿಷ್ಠ ರಕ್ಷಣೆ ನೀಡಲಾಯಿತು.
ಇದನ್ನೂ ಓದಿ : Modi in Karnataka : ಹುಲಿ ಪ್ರಾಜೆಕ್ಟ್ ಕಾರ್ಯಕ್ರಮಕ್ಕೆ ಬರುವ ಪ್ರಧಾನಿ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡ್ತಾರಾ?
ಪ್ರಾಜೆಕ್ಟ್ ಟೈಗರ್ಗೆ ಈಗ 50 ವರ್ಷವಾಗಿದೆ. ಅದರ ಸಂಭ್ರಮಾಚರಣೆ ಇದೀಗ ನಡೆಯುತ್ತಿದೆ. ವಿಶ್ವದ 13 ದೇಶಗಳಲ್ಲಿ ಹುಲಿಗಳಿವೆ. ಭಾರತ, ಬಾಂಗ್ಲಾದೇಶ. ವಿಯೆಟ್ನಾಮ್, ಕಾಂಬೋಡಿಯಾ, ಭೂತಾನ್, ಥಾಯ್ಲೆಂಡ್, ಇಂಡೋನೇಷ್ಯಾ, ಲಾವೋಸ್, ಚೀನಾ. ಮಲೇಷ್ಯಾ., ರಷ್ಯಾ. ನೇಪಾಳ ಮತ್ತು ಮ್ಯಾನ್ಮಾರ್.
ಕರ್ನಾಟಕ ಹೇಗೆ ನಂಬರ್ ಒನ್?
ಈ ಬಾರಿ ಗಣತಿಯಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆಯುವುದಕ್ಕೆ ಹಲವು ಕಾರಣಗಳಿವೆ. 2018ರ ಜನಗಣತಿಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿತ್ತು. ಕರ್ನಾಟಕದಲ್ಲಿ 524 ಹುಲಿಗಳಿದ್ದರೆ, 526 ಹುಲಿಗಳೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿತ್ತು. ಆದರೆ, ಇತ್ತೀಚಿನ ವರದಿ ಪ್ರಕಾರ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳು ಸತ್ತಿವೆ. 2023ರಲ್ಲಿಯೇ ಮಧ್ಯಪ್ರದೇಶದಲ್ಲಿ 9 ಹುಲಿಗಳು ಸತ್ತಿದ್ದರೆ ಕರ್ನಾಟಕದಲ್ಲಿ ಕೇವಲ 2 ಹುಲಿಗಳು ಮೃತಪಟ್ಟಿದ್ದವು. ಮಹಾರಾಷ್ಟ್ರದಲ್ಲಿ 7, ರಾಜಸ್ಥಾನದಲ್ಲಿ 3 ಹಾಗೂ ಉತ್ತರಾಖಂಡದಲ್ಲಿ 3 ಹಾಗೂ ಕೇರಳ ಹಾಗೂ ಅಸ್ಸಾಮ್ನಲ್ಲಿ ತಲಾ ಒಂದು ಹುಲಿ ಸತ್ತಿದ್ದವು.
ವ್ಯಾಪ್ತಿ ಪ್ರದೇಶದ ಸ್ವಾಮ್ಯಕ್ಕಾಗಿ ನಡೆದ ಗಲಾಟೆ, ಹುಲಿ ಮತ್ತು ಮಾನವ ಸಂಘರ್ಷ ಹಾಗೂ ರಸ್ತೆಯಲ್ಲಿ ವಾಹನಗಳ ಅಡಿಗೆ ಸಿಲುಕಿ ಸಾಯುವ ಪ್ರಕರಣದಿಂದಾಗಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ. 2022ರಲ್ಲಿ ಭಾರತದಲ್ಲಿ 116 ಹುಲಿಗಳು ಸತ್ತಿದ್ದರೆ, 2021ರಲ್ಲಿ 127 ಹುಲಿಗಳು ಸಾವಿಗೀಡಾಗಿದ್ದವು.