ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಸೆಪ್ಟೆಂಬರ್ 17) 73ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ, ಬಿಜೆಪಿಯು ದೇಶಾದ್ಯಂತ ಅದ್ಧೂರಿಯಾಗಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಿಸಲು ತೀರ್ಮಾನಿಸಿದೆ. ಹಲವು ಯೋಜನೆಗಳ ಘೋಷಣೆ, ಯೋಜನೆಗಳಿಗೆ ಚಾಲನೆ, ಜನರಿಗೆ ನೆರವು, ಸೇವಾ ಕಾರ್ಯಕ್ರಮಗಳಿಂದ ಹಿಡಿದು ರಕ್ತದಾನ ಶಿಬಿರಗಳವರೆಗೆ ವಿವಿಧ ರೀತಿಯಲ್ಲಿ ಮೋದಿ ಅವರ ಜನ್ಮದಿನವನ್ನು ಸಾರ್ಥಕವಾಗಿ (PM Modi Birthday) ಆಚರಿಸಲು ತೀರ್ಮಾನಿಸಲಾಗಿದೆ. ಹಾಗಾದರೆ, ಮೋದಿ ಜನ್ಮದಿನವನ್ನು ಬಿಜೆಪಿ ಹೇಗೆ ಆಯೋಜಿಸುತ್ತದೆ? ಯಾವ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.
ಸೇವಾ ಪಖ್ವಾಡ
ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿಯು ದೇಶಾದ್ಯಂತ ಸೇವಾ ಪಖ್ವಾಡ ( ಪಾಕ್ಷಿಕ ಅಥವಾ 15 ದಿನ ಸೇವೆ) ಅಭಿಯಾನ ಆರಂಭಿಸಲು ತೀರ್ಮಾನಿಸಿದೆ. ಆರೋಗ್ಯ ಯೋಜನೆಗಳ ಗುಚ್ಛವಾದ “ಆಯುಷ್ಮಾನ್ ಭವ” ಅಭಿಯಾನ, ರಕ್ತದಾನ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಅಭಯಾನ ನಡೆಯಲಿದೆ.
30 ಸಾವಿರ ಶಾಲಾ ಮಕ್ಕಳಿಗೆ ಬ್ಯಾಂಕ್ ಖಾತೆ
ಗುಜರಾತ್ ಬಿಜೆಪಿಯೂ ರಾಜ್ಯದಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ. ಅದರಲ್ಲೂ, ನವಸಾರಿ ಜಿಲ್ಲೆಯ 30 ಸಾವಿರ ಶಾಲಾ ವಿದ್ಯಾರ್ಥಿನಿಯರಿಗೆ ಬ್ಯಾಂಕ್ ಖಾತೆ ತೆರೆಯಲು ನಿರ್ಧರಿಸಿದೆ. ಪ್ರಧಾನಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಪ್ರಯೋಜನ ಪಡೆಯಲು ಬ್ಯಾಂಕ್ ಖಾತೆಗಳು ನೆರವಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಹಾಗೆಯೇ, ಬಿಜೆಪಿ ಯುವ ಮೋರ್ಚಾದಿಂದ ಗುಜರಾತ್‌ನ ಎಲ್ಲ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲು ತೀರ್ಮಾನಿಸಲಾಗಿದೆ.
Every year, we bring something new to celebrate sports, health & wellness to people of Bengaluru South.#ModiCricketCup2023, marking birthday of our beloved PM Sri @narendramodi Ji, is all set to begin in two days.
— Tejasvi Surya (@Tejasvi_Surya) September 14, 2023
Here’s a short preview of the event! pic.twitter.com/Wo7TYT251m
ತ್ರಿಪುರದಲ್ಲಿ ‘ನಮೋ ವಿಕಾಸ ಉತ್ಸವ’
ತ್ರಿಪುರದಲ್ಲೂ ಬಿಜೆಪಿಯು ಹತ್ತಾರು ಸೇವಾ ಕಾರ್ಯಕ್ರಮ ಆಯೋಜಿಸಿದೆ. ಸಚಿವರು, ಶಾಸಕರು ಸೇರಿ ಸೆಪ್ಟೆಂಬರ್ 17ರಂದು ಯೋಗಾಸನ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ 73 ಜನರಿಗೆ ಭಗವದ್ಗೀತೆ ವಿತರಣೆ, 73 ವಿಶೇಷ ಚೇತನರಿಗೆ ಸರ್ಕಾರದ ನೆರವು, 73 ಮನೆಗಳಿಗೆ ಪಿಜಿ ರೇಷನ್ ಕಾರ್ಡ್ ವಿತರಣೆ, ಸ್ವಯಂಸೇವಕರಿಂದ ಸ್ವಚ್ಛತಾ ಅಭಿಯಾನ ಕೂಡ ನಡೆಯಲಿದೆ.
ಇದನ್ನೂ ಓದಿ: PM Narendra Modi: ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ಮೋದಿಯ ನಂ.1 ಸ್ಥಾನ ಅಬಾಧಿತ!
ನೂತನ ಸಂಸತ್ ಭವನದಲ್ಲಿ ತಿರಂಗಾ ಹಾರಾಟ
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನೂತನ ಸಂಸತ್ ಭವನದಲ್ಲಿ ತಿರಂಗಾ ಹಾರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸೆಪ್ಟೆಂಬರ್ 19ರಂದು ನೂತನ ಸಂಸತ್ ಭವನದಲ್ಲಿಯೇ ವಿಶೇಷ ಅಧಿವೇಶನ ನಡೆಯಲಿದೆ. ಇದಕ್ಕೂ ಮೊದಲು ಹೊಸ ಸಂಸತ್ ಭವನದಲ್ಲಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ರಾಷ್ಟ್ರ ಧ್ವಜ ಹಾರಿಸಲಾಗುತ್ತದೆ.
ವಿಶ್ವಕರ್ಮ ಯೋಜನೆಗೆ ಚಾಲನೆ
ವಿಶ್ವಕರ್ಮ ಜಯಂತಿ ದಿನವಾದ ಸೆಪ್ಟೆಂಬರ್ 17ರಂದೇ ನರೇಂದ್ರ ಮೋದಿ ಅವರ ಜನ್ಮದಿನವೂ ಇದೆ. ಹಾಗಾಗಿ, ಸೆಪ್ಟೆಂಬರ್ 17ರಂದು ನರೇಂದ್ರ ಮೋದಿ ಅವರೇ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕ ಕರಕುಶಲ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ನೆರವು ನೀಡುವ ದಿಸೆಯಲ್ಲಿ ಯೋಜನೆ ರೂಪಿಸಲಾಗಿದೆ. ಆಗಸ್ಟ್ 15ರಂದೇ ಮೋದಿ ಅವರು ಯೋಜನೆ ಘೋಷಿಸಿದ್ದರು. ಅದರಂತೆ ಸೆಪ್ಟೆಂಬರ್ 17ರಂದು ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 13 ಸಾವಿರ ಕೋಟಿ ರೂ. ವ್ಯಯಿಸುತ್ತಿದೆ.