Site icon Vistara News

Sonia Gandhi : ಸೋನಿಯಾ ಗಾಂಧಿಗೆ ವಿಶೇಷ ರೀತಿಯಲ್ಲಿ ಜನುಮ ದಿನದ ಶುಭಾಶಯ ತಿಳಿಸಿದ ಮೋದಿ

Sonia Gandhi

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ 77 ನೇ ಹುಟ್ಟುಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್​ ನಾಯಕಿಯ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಧಾನಿ ಮೋದಿ ಪ್ರಾರ್ಥಿಸಿದ್ದಾರೆ. “ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ದೀರ್ಘ ಮತ್ತು ಆರೋಗ್ಯಕರ ಜೀವನ ದೊರೆಯಲಿ ” ಎಂದು ಪ್ರಧಾನಿ ಮೋದಿ ಅವರು ಎಕ್ಸ್​ನಲ್ಲಿ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಶಶಿ ತರೂರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಮಾಜಿ ಕಾಂಗ್ರೆಸ್ ಮುಖಂಡೆಗೆ ಶುಭ ಕೋರಿದ್ದಾರೆ.

ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ಸೋನಿಯಾ ಗಾಂಧಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ, “ಅಂಚಿನಲ್ಲಿರುವವರ ಹಕ್ಕುಗಳ ನಿರಂತರ ಪ್ರತಿಪಾದಕರಾದ ಅವರು ಧೈರ್ಯ ಮತ್ತು ನಿಸ್ವಾರ್ಥ ಸೇವೆಯೊಂದಿಗೆ ಪ್ರತಿಕೂಲ ಪರಿಸ್ಥಿತಿಯ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಧೈರ್ಯದ ಸಂಕೇತವಾಗಿದ್ದಾರೆ. ನಾನು ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಸಿಗಲಿ ಎಂದು ಬಯಸುತ್ತೇನೆ. ಎಂದು ಖರ್ಗೆ ಬರೆದುಕೊಂಡಿದ್ದಾರೆ.

ಸಾರ್ವಜನಿಕ ಸೇವೆ ಮತ್ತು ಸಮಾಜದ ಬಡ ಮತ್ತು ಅಳಿವಿನಂಚಿನಲ್ಲಿರುವ ವರ್ಗಗಳ ಉನ್ನತಿಗಾಗಿ ಸೋನಿಯಾ ಗಾಂಧಿಯವರ ಬದ್ಧತೆಯು ಶತಕೋಟಿ ಹೃದಯಗಳನ್ನು ಗೆದ್ದಿದೆ ಎಂದು ಕೆ.ಸಿ ವೇಣುಗೋಪಾಲ್ ಬರೆದುಕೊಂಡಿದ್ದಾರೆ. “ಅವರ ಜೀವನ ಪಯಣ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರು ಕಾಂಗ್ರೆಸ್ ಅನ್ನು ಅತ್ಯಂತ ಸವಾಲಿನ ಅವಧಿಯಲ್ಲಿ ಸಮಚಿತ್ತದಿಂದ ಮುನ್ನಡೆಸಿದ್ದಾರೆ. ಎಲ್ಲರ ಕಲ್ಯಾಣ ಮತ್ತು ದೇಶದ ಅಭಿವೃದ್ಧಿ ಮಾಡಿದ ಯುಪಿಎ ಸರ್ಕಾರದ ವಾಸ್ತುಶಿಲ್ಪಿಯಾಗಿದ್ದರು” ಎಂದು ಅವರು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅನ್ನು ಬಹಳ ವಿಶಿಷ್ಟವಾಗಿ ಮುನ್ನಡೆಸಿದ್ದಾರೆ. ಅದರ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಶಶಿ ತರೂರ್ ಶ್ಲಾಘಿಸಿದ್ದಾರೆ. “ಅವರು ದೀರ್ಘಕಾಲ ಆರೋಗ್ಯ ಮತ್ತು ಸಂತೋಷವನ್ನು ಅನುಭವಿಸಲಿ ಮತ್ತು ನಮ್ಮ ಪಕ್ಷಕ್ಕೆ ಮಾರ್ಗದರ್ಶನ ನೀಡುವುದನ್ನು ಮತ್ತು ನಮ್ಮ ರಾಷ್ಟ್ರದ ಸೇವೆ ಮಾಡುವುದನ್ನು ಮುಂದುವರಿಸಲಿ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿ ವಿದೇಶ ಪ್ರವಾಸಕ್ಕೆ ʼಇಂಡಿಯಾʼ ನಾಯಕರಿಂದಲೇ ಬ್ರೇಕ್‌!

ತಮಿಳನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಸೋನಿಯಾ ಗಾಂಧಿಗೆ ಉತ್ತಮ ಆರೋಗ್ಯದಿಂದ ತುಂಬಿದ ದೀರ್ಘಾಯುಷ್ಯ ದೊರೆಯಲಿ ಎಂದು ಹಾರೈಸಿದ್ದಾರೆ. “ಅವರ ಆಳವಾದ ದೃಷ್ಟಿಕೋನ ಮತ್ತು ಅನುಭವದ ಸಂಪತ್ತು ಭಾರತವನ್ನು ನಿರಂಕುಶ ಶಕ್ತಿಗಳಿಂದ ಉಳಿಸುವ ನಮ್ಮ ಒಗ್ಗಟ್ಟಿನ ಪ್ರಯತ್ನದಲ್ಲಿ ಮಾರ್ಗದರ್ಶಿಯಾಗಿ ಮುಂದುವರಿಯಲಿ” ಎಂದು ಅವರು ಬರೆದಿದ್ದಾರೆ.

Exit mobile version