ಅಮ್ರೋಹಾ(ಉತ್ತರ ಪ್ರದೇಶ): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi ) ಮತ್ತೊಂದು ಬಾರಿ ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಕ್ರಿಕೆಟ್ ವಿಶ್ವಕಪ್ನಲ್ಲಿ ಸಹೋದರ ಮೊಹಮ್ಮದ್ ಶಮಿ ಮಾಡಿದ ಅದ್ಭುತ ಸಾಧನೆಯನ್ನು ಇಡೀ ಜಗತ್ತು ನೋಡಿದೆ. ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಅವರಿಗೆ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿದೆ. “ಯೋಗಿ ಜಿ ಅವರ ಸರ್ಕಾರ ಎರಡು ಹೆಜ್ಜೆ ಮುಂದೆ ಹೋಗಿದೆ. ಯೋಗಿ ಜಿ ಅವರು ಇಲ್ಲಿನ ಯುವಕರಿಗಾಗಿ ಶಮಿ ಹೆಸರಿನಲ್ಲಿ ಕ್ರೀಡಾಂಗಣವನ್ನು ಸಹ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ನಾನು ಅಮ್ರೋಹಾದ ಜನರನ್ನು ತುಂಬಾ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ನಲ್ಲಿ ಶಮಿ ಏಳು ವಿಕೆಟ್ಗಳನ್ನು ಪಡೆದಿದ್ದರು. ಎಡ ಪಾದದ ಗಾಯದಿಂದಾಗಿ ಅವರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿದಿದ್ದಾರೆ.
ಅಮ್ರೋಹಾದ ‘ಧೋಲಕ್’ (ಸಂಗೀತ ವಾದ್ಯ) ಅನ್ನೂ ಪ್ರಧಾನಿ ಇದೇ ವೇಳೆ ಶ್ಲಾಘಿಸಿದರು. ಗಂಗಾ ಮಾತೆಯ ದಡದಲ್ಲಿರುವ ಈ ಭೂಮಿ ಭಗವಾನ್ ಶ್ರೀ ಕೃಷ್ಣನ ಹೆಜ್ಜೆಗುರುತುಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದು ರಾಜಾ ಗಜ ಸಿಂಗ್ ಮತ್ತು ಠಾಕೂರ್ ಜೈರಾಮ್ ಸಿಂಗ್ ಅವರಂತಹ ಸಾಹಸಿಗರು ಹುಟ್ಟಿದ ಜನರ ಭೂಮಿ. ನನಗೆ ಧೋಲಕ್ ನೀಡಿದ್ದೀರಿ. ಇದು ಅಮ್ರೋಹಾದ ಮತ್ತೊಂದು ಹೆಗ್ಗುರುತು. ಇಲ್ಲಿನ ಧೋಲಕ್ ನ ಬಡಿತವು ಎಲ್ಲೆಡೆ ಪ್ರತಿಧ್ವನಿಸುತ್ತದೆ. ನಮ್ಮ ಯೋಗಿ ಜಿ ಅವರ ಪ್ರಯತ್ನದಿಂದಾಗಿ, ಬಿಜೆಪಿ ಸರ್ಕಾರವು ಅಮ್ರೋಹಾದ ಧೋಲಕ್ಗೆ ಜಿಐ (ಜಿಯಾಗ್ರಾಫಿಕಲ್ ಇಂಡಿಕೇಟೆಡ್ ಒರಿಜಿನ್) ಟ್ಯಾಗ್ ನೀಡಿದೆ. ಇಡೀ ಜಗತ್ತಿನಲ್ಲಿ ಅದಕ್ಕೆ ಒಂದು ಗುರುತನ್ನು ಕೊಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ
ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಯುಪಿಯಲ್ಲಿ ಮತದಾನ ನಡೆಯಲಿದ್ದು, ಅಮ್ರೋಹಾ, ಮೀರತ್, ಬಾಗ್ಪತ್, ಗಾಜಿಯಾಬಾದ್, ಗೌತಮಬುದ್ಧ ನಗರ, ಬುಲಂದ್ಶಹರ್ (ಎಸ್ಸಿ), ಅಲಿಗಢ ಮತ್ತು ಮಥುರಾ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಅಮ್ರೋಹಾದಲ್ಲಿ ಬಿಜೆಪಿಯ ಕನ್ವರ್ ಸಿಂಗ್ ತನ್ವರ್ ಮತ್ತು ಕಾಂಗ್ರೆಸ್ ನ ಡ್ಯಾನಿಶ್ ಅಲಿ ನಡುವೆ ಪ್ರಮುಖ ಸ್ಪರ್ಧೆ ಇದೆ. ಬಿಎಸ್ಪಿಯ ಮುಜಾಹಿದ್ ಹುಸೇನ್ ಕೂಡ ಚುನಾವಣಾ ಕಣದಲ್ಲಿದ್ದಾರೆ. ಅಮ್ರೋಹಾದಿಂದ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.