ನವದೆಹಲಿ: ನರೇಂದ್ರ ಮೋದಿ ಅವರು (Narendra Modi) ಪರೀಕ್ಷಾ ಪೇ ಚರ್ಚಾ (Pariksha Pe Charcha 2024) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವುದು ಹೇಗೆ, ಆತ್ಮವಿಶ್ವಾಸದಿಂದ ಬರೆಯುವುದು ಹೇಗೆ ಎಂಬುದರ ಕುರಿತು ಸಲಹೆ ನೀಡುವ ಜತೆಗೆ ಪೋಷಕರಿಗೂ (Parents) ಕಿವಿಮಾತುಗಳನ್ನು ಹೇಳಿದರು. ಮಕ್ಕಳು ಪರೀಕ್ಷೆಯಲ್ಲಿ ಯಶಸ್ವಿಯಾಗಲು ಪೋಷಕರ ಪಾತ್ರ ಎಷ್ಟು ಮಹತ್ವ ಎಂಬುದನ್ನು ಕೂಡ ತಿಳಿಸಿದರು. ಮೋದಿ ಹೇಳಿದ ಟಾಪ್ 10 ಕಿವಿಮಾತುಗಳು ಇಲ್ಲಿವೆ.
Hon’ble PM Shri Narendra Modi ji interacts with students, teachers & parents on exams at Pariksha Pe Charcha 2024
— Nitin Gadkari (@nitin_gadkari) January 29, 2024
https://t.co/ILma1KzNVD
ಪೋಷಕರಿಗೆ ಮೋದಿ ನೀಡಿದ ಟಾಪ್ 10 ಕಿವಿಮಾತುಗಳು
- ಪೋಷಕರು ತಮ್ಮ ಮನಸ್ಥಿತಿಯನ್ನು ತಿಳಿದುಕೊಳ್ಳಬೇಕು. ಮೊದಲು ಪೋಷಕರು ಮಕ್ಕಳನ್ನು ನಂಬಬೇಕು. ಅವರ ಮೇಲೆ ನಂಬಿಕೆ ಇಟ್ಟರೆ ಮಾತ್ರ ಅವರು ಪರೀಕ್ಷೆಯಲ್ಲಾಗಲಿ, ಜೀವನದಲ್ಲಾಗಲಿ ನಂಬಬೇಕು. ಇದು ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ.
- ನೀನು ಮೊಬೈಲ್ ಬಳಸುತ್ತೀಯ, ಗೆಳೆಯರ ಜತೆ ಸುತ್ತಾಡುತ್ತೀಯ, ಓದದೇ ನಿದ್ದೆ ಮಾಡುತ್ತೀಯ ಎಂದು ಪೋಷಕರು ಮಕ್ಕಳನ್ನು ದೂರುವ ಬದಲು, ಮಕ್ಕಳಿಗೆ ಶಾಂತ ರೀತಿಯಿಂದ ತಿಳಿಹೇಳಬೇಕು. ಮುಕ್ತ ವಾತಾವರಣ ಇದ್ದಾಗ ಮಾತ್ರ ಮಕ್ಕಳು ನಿರುಮ್ಮಳವಾಗಿ ಇರಲು ಸಾಧ್ಯವಾಗುತ್ತದೆ.
- ಬೇರೆ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡುವುದು ಪೋಷಕರು ಮಾಡುವ ದೊಡ್ಡ ತಪ್ಪು. ಮಕ್ಕಳನ್ನು ಬೆಳೆಸುವುದು ಅಂದರೆ ಸ್ವತಂತ್ರವಾಗಿ ಬೆಳೆಸುವುದೇ ಹೊರತು, ಹೋಲಿಕೆ ಮಾಡಿ ಬೆಳೆಸುವುದಲ್ಲ. ಇದರಿಂದ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
- ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದು ಎಂದರೆ, ಬರೀ ಓದಿಸುವುದು, ಹೋಮ್‌ವರ್ಕ್ ಮಾಡಿಸುವುದು ಅಲ್ಲ. ಅವರ ಆಸಕ್ತಿಗಳಿಗೆ ಅವಕಾಶ ಕೊಡಿ. ಗೆಳೆಯರೊಂದಿಗೆ ಬೆರೆಯಲು ಬಿಡಿ. ಇದರೊಂದಿಗೆ ಅವರ ಮನಸ್ಸು ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳಿ.
- ಪರೀಕ್ಷೆ ದಿನ ಮಕ್ಕಳಿಗೆ ಒಳ್ಳೆಯ ಪೆನ್, ಬಟ್ಟೆ, ಸಿಹಿ ತಿಂಡಿ ಮಾಡಿಕೊಡುವುದಷ್ಟೇ ಅಲ್ಲ, ಅವರನ್ನು ಖುಷಿಯಿಂದ ಪರೀಕ್ಷಾ ಕೊಠಡಿಗೆ ಕಳುಹಿಸಿ. ಮಕ್ಕಳು ಏನು ತಿಂದು ಹೋದರು ಎಂಬುದಕ್ಕಿಂತ ಅವರು ಯಾವ ಮನಸ್ಸಿನಿಂದ ಪರೀಕ್ಷಾ ಕೊಠಡಿಗೆ ಹೋದರು ಎಂಬುದು ಅವರ ಯಶಸ್ಸಿಗೆ ಕಾರಣವಾಗುತ್ತದೆ.
- ಪೋಷಕರು ಇಡೀ ದಿನ ಮೊಬೈಲ್ ಬಳಸಿ, ಇಡೀ ದಿನ ಟಿವಿ ನೋಡಿ, ಅವರಿಗೆ ಮೊಬೈಲ್ ಬಳಸಬೇಡಿ ಎಂದರೆ ಮಕ್ಕಳು ಕೇಳುವುದಿಲ್ಲ. ಮಕ್ಕಳಿಗಾಗಿ ಪೋಷಕರೂ ತಮ್ಮ ರೂಢಿ, ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು.
- ಊಟ ಮಾಡುವ ಸಮಯದಲ್ಲಿ ಗ್ಯಾಜೆಟ್‌ಗಳನ್ನು ಬಳಸಬಾರದು ಎಂಬ ನಿಯಮ ಇರಲಿ. ಪೋಷಕರೂ ನಿಯಮಗಳನ್ನು ಪಾಲಿಸಿ. ನೋ ಗೆಜೆಟ್ ಜೋನ್ ಮನೆಯಲ್ಲೂ ಇರಲಿ. ಪೋಷಕರನ್ನು ಮಕ್ಕಳು ಅನುಸರಿಸುತ್ತವೆ ಎಂಬುದು ಪೋಷಕರಿಗೂ ಗೊತ್ತಿರಲಿ.
- ಮೊಬೈಲ್‌ಗಳನ್ನು ಬಳಸಬಾರದು ಎಂದು ತಂದೆ-ತಾಯಿಯು ಆಗ್ರಹಿಸುವ ಬದಲು, ಮೊಬೈಲ್ ಬಳಕೆಯಿಂದ ಇರುವ ನಕಾರಾತ್ಮಕ ಹಾಗೂ ಸಕಾರಾತ್ಮಕ ಅಂಶಗಳು ಏನಿವೆ ಎಂಬುದನ್ನು ತಿಳಿಸಿ. ಮೊಬೈಲ್ ಬಳಸಿಯೇ ಅವರು ಶಿಕ್ಷಣದ ಲಾಭ ಪಡೆಯಬಹುದು, ಪರೀಕ್ಷೆಗೆ ಸಿದ್ಧರಾಗಬಹುದು ಎಂಬುದು ತಿಳಿಸಿ.
- ಎಲ್ಲರೂ ಓದಿ, ಪರೀಕ್ಷೆ ಬರೆದು ಉತ್ತೀರ್ಣರಾಗುವುದೇ ಜೀವನ ಎಂದಾದರೆ, ಇಂದು ಒಬ್ಬರೂ ಪೇಂಟಿಂಗ್ ಕಲಾವಿದರು ಇರುತ್ತಿರಲಿಲ್ಲ. ಶಿಕ್ಷಣದ ಜತೆಗೆ ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಿಸಬೇಕು. ಇದು ಅವರ ಭವಿಷ್ಯಕ್ಕೂ ಪೂರಕವಾಗುತ್ತದೆ.
- ಮಕ್ಕಳ ಜತೆ ಪೋಷಕರು ಸ್ನೇಹಿತರಂತೆ ವರ್ತಿಸುವುದು ಅವರಿಗೆ ಮುಕ್ತ ವಾತಾವರಣದ ಅನುಭವವಾಗುತ್ತದೆ. ಆಗ ಅವರು ಎಲ್ಲವನ್ನೂ ನಿಮ್ಮಲ್ಲಿ ಹೇಳಿಕೊಳ್ಳುತ್ತಾರೆ. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಮಕ್ಕಳು ಪೋಷಕರೊಂದಿಗೆ ಅಂತರ ಕಾಯ್ದುಕೊಳ್ಳುವ ವಾತಾವರಣ ಇರುವುದು ಅಪಾಯಕಾರಿ.
ಇದನ್ನೂ ಓದಿ: Pariksha Pe Charcha 2024: ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಮೋದಿ ನೀಡಿದ ಟಾಪ್ 10 ಸಲಹೆಗಳಿವು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ