ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಭಾರತ್ ಮಂಟಪದಲ್ಲಿ ನಡೆದ 2024ನೇ ಸಾಲಿನ ಪರೀಕ್ಷಾ ಪೇ ಚರ್ಚಾ (Pariksha Pe Charcha 2024) ಕಾರ್ಯಕ್ರಮ ಮುಕ್ತಾಯಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಪಾಲ್ಗೊಂಡರು. ನರೇಂದ್ರ ಮೋದಿ (Narendra Modi) ಅವರು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಹತ್ತಾರು ಸಲಹೆ ನೀಡಿದರು. ಮಕ್ಕಳ ಭವಿಷ್ಯದ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆ ಎಂಬುದನ್ನು ತಿಳಿಸಿದರು. ಅಲ್ಲದೆ, ಕೆಲ ಟಿಪ್ಸ್‌ಗಳನ್ನೂ ಕೊಟ್ಟರು.
#WATCH | Prime Minister Narendra Modi greets the students present at the Bharat Mandapam in Delhi, for 'Pariksha Pe Charcha' 2024. pic.twitter.com/idR1uLJDNX
— ANI (@ANI) January 29, 2024
ಶಿಕ್ಷಕರಿಗೆ ಪ್ರಧಾನಿ ಮೋದಿ ಕ್ಲಾಸ್
- ಶಿಕ್ಷಕ ವೃತ್ತಿಯು ಅದೊಂದು ಜಾಬ್ ಅಲ್ಲ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕವಾಗಿದೆ. ಸಿಲಬಸ್ ಮುಗಿಸುವುದೊಂದೇ ಕೆಲಸ ಅಲ್ಲ. ಮಕ್ಕಳ ಭವಿಷ್ಯ ರೂಪಿಸುವುದೇ ಶಿಕ್ಷಕರ ಗುರಿಯಾಗಲಿ.
- ವೈದ್ಯರ ರೀತಿ ಶಿಕ್ಷಕರು ಕೆಲಸ ಮಾಡಬೇಕು. ರಜೆ ಸೇರಿ ಹಲವು ಸಂದರ್ಭಗಳಲ್ಲಿ ಮಕ್ಕಳಿಗೆ ಕರೆ ಮಾಡಿ, ಅವರ ಅಧ್ಯಯನದ ಕುರಿತು ಮಾಹಿತಿ ಪಡೆಯಬೇಕು. ಅವರಿಗೆ ಆಗಾಗ ಮಾರ್ಗದರ್ಶನ ನೀಡಬೇಕು.
- ಓದು ಮುಗಿದು, ಶಾಲೆ ಬಿಟ್ಟ ಹೋದ ಮೇಲೂ ಮಕ್ಕಳು ನಿಮ್ಮ ಜತೆ ಸಂಪರ್ಕದಲ್ಲಿದ್ದಾರೆ, ನಿಮಗೆ ಮದುವೆ ಕಾರ್ಡ್ ಕೊಡಲು ಹುಡುಕಿಕೊಂಡು ಬರುತ್ತಾರೆ ಎಂದರೆ ಮಾತ್ರ ನೀವೊಬ್ಬ ಉತ್ತಮ ಶಿಕ್ಷಕರು. ಹಾಗಾಗಿ, ಮಕ್ಕಳ ಜತೆ ಅನ್ಯೋನ್ಯವಾಗಿರಿ.
- ಕ್ಲಾಸ್‌ನಲ್ಲಿ ಬರೀ ಜಾಣ ವಿದ್ಯಾರ್ಥಿಗಳನ್ನಷ್ಟೇ ಗುರುತಿಸದಿರಿ. ಅಧ್ಯಯನದಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಫೋಕಸ್ ಮಾಡಿ. ಜಾಣರ ಜತೆಗೆ ಹಿಂದಿರುವವರೂ ಏಳಿಗೆ ಹೊಂದುವಂತೆ ಮಾಡಿ.
- ಬರೀ ಬೈದು, ಗದರಿಸಿ, ಮಕ್ಕಳಿಗೆ ಶಿಕ್ಷಣ ನೀಡುವುದು ಸರಿಯಲ್ಲ. ಮಕ್ಕಳ ಸಣ್ಣ ಸಾಧನೆಯನ್ನೂ ಹೊಗಳಿ. ಅವರ ಅಕ್ಷರ ದುಂಡಾಗಿದ್ದರೆ, ಎಲ್ಲರ ಎದುರೂ ಪ್ರಶಂಸಿಸಿ. ಅದು ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ.
- ಮಕ್ಕಳು ಕಡ್ಡಾಯವಾಗಿ ಓದಬೇಕು, ಬರೆಯಬೇಕು ಎಂದು ನಿಯಮ ರೂಪಿಸುವುದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತೆ ಮಾಡುತ್ತದೆ. ಅದರ ಬದಲು, ಓದುವುದು, ಬರೆಯುವುದರಲ್ಲಿ ಮಕ್ಕಳು ಆಸಕ್ತಿ ಹೆಚ್ಚಿಸುವಂತೆ ಬದಲಾವಣೆ ಜಾರಿಗೆ ತನ್ನಿ.
ಇದನ್ನೂ ಓದಿ: Pariksha Pe Charcha 2024: ಮಕ್ಕಳ ಭವಿಷ್ಯ; ಪೋಷಕರಿಗೆ ಮೋದಿ ಹೇಳಿದ 10 ಕಿವಿಮಾತುಗಳೇನು?
10ನೇ ಮತ್ತು 12ನೇ ತರಗತಿಯ 2024ರ ಬೋರ್ಡ್ ಎಕ್ಸಾಮ್‌ಗೆ ಮುನ್ನ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುತ್ತಿರುವ ʼಪರೀಕ್ಷಾ ಪೆ ಚರ್ಚಾ 2024′ (Pariksha Pe Charcha 2024) ಕಾರ್ಯಕ್ರಮದಲ್ಲಿ ಇದೂ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು. ಸೋಮವಾರ ದಿಲ್ಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು. ದೇಶಾದ್ಯಂತದಿಂದ ಬಂದ ಹಲವು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ನೇರವಾಗಿ ಹಾಗೂ ಆನ್‌ಲೈನ್ ಮೂಲಕ ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ