ನವದೆಹಲಿ: ಒಂದು ಕಾಲದಲ್ಲಿ ನರೇಂದ್ರ ಮೋದಿ (Narendra Modi) ಅವರನ್ನು ವಿರೋಧಿಸುತ್ತಿದ್ದ, ಟೀಕಾಸ್ತ್ರ ಪ್ರಯೋಗಿಸುತ್ತಿದ್ದ ಜೆಎನ್‌ಯು ಮಾಜಿ ವಿದ್ಯಾರ್ಥಿನಿ, ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್ (Shehla Rashid) ಅವರು ಇತ್ತೀಚೆಗೆ ಮೋದಿ ಅವರ ಕೆಲಸಗಳನ್ನು ಮೆಚ್ಚುತ್ತಿದ್ದಾರೆ. ಈಗ ಮತ್ತೆ ಮೋದಿ ಅವರನ್ನು ಶೆಹ್ಲಾ ರಶೀದ್ ಅವರು ಹೊಗಳಿದ್ದಾರೆ. “ನರೇಂದ್ರ ಮೋದಿ ಅವರು ಟೀಕೆಗಳ ಹೊರತಾಗಿಯೂ ನಿಸ್ವಾರ್ಥಿ. ಅವರು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
“ನರೇಂದ್ರ ಮೋದಿ ಅವರು ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಟೀಕೆಗಳಿಗೆ ಯಾವತ್ತೂ ಕಿವಿಗೊಡುವುದಿಲ್ಲ. ತಮ್ಮ ಜನಪ್ರಿಯತೆಯನ್ನು ಬದಿಗಿಟ್ಟು ಅವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಇಂದು ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಅಲ್ಲದೆ, ಹಲವು ದಂಗೆಗಳನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ದೇಶದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ” ಎಂದು ಶೆಹ್ಲಾ ರಶೀದ್ ಹೇಳಿದ್ದಾರೆ.
ಶೆಹ್ಲಾ ರಶೀದ್ ಹೇಳಿದ್ದಿಷ್ಟು…
EP-115 with Shehla Rashid premieres today at 5 PM IST
— ANI (@ANI) November 14, 2023
"Kashmir is not Gaza…" – Shehla Rashid praises PM Modi and HM Shah
Tune in here: https://t.co/LLgzRg3fCS #ShehlaRashid #ANIPodcastWithSmitaPrakash #JammuKashmir pic.twitter.com/ahMuNkJ4r0
ಇದಕ್ಕೂ ಮೊದಲು ಕೂಡ ಶೆಹ್ಲಾ ರಶೀದ್ ಅವರು ಮೋದಿ ಸರ್ಕಾರವನ್ನು ಬಣ್ಣಿಸಿದ್ದರು. ಇಸ್ರೇಲ್-ಹಮಾಸ್ ಉಗ್ರರ ಸಂಘರ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಮೋದಿ ಸರ್ಕಾರವನ್ನು ಹೊಗಳಿದ್ದರು. “ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಪರಿಸ್ಥಿತಿಗಳು, ಇತ್ತೀಚಿನ ಸನ್ನಿವೇಶಗಳನ್ನು ಗಮನಿಸಿದರೆ, ನಾವು ಭಾರತೀಯರಾಗಿ ಹುಟ್ಟಿ ಎಷ್ಟು ಪುಣ್ಯ ಮಾಡಿದ್ದೇವೆ ಎಂದು ಅನಿಸುತ್ತಿದೆ. ಭಾರತದ ಸುರಕ್ಷತೆಗೆ ದೇಶದ ಸೈನಿಕರು, ಭದ್ರತಾ ಸಿಬ್ಬಂದಿಯು ಎಷ್ಟು ಶ್ರಮಿಸುತ್ತಾರೆ ಎಂಬುದು ತಿಳಿಯುತ್ತದೆ. ಅದರಲ್ಲೂ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಡಿಜಿಪಿ ಮನೋಜ್ ಸಿನ್ಹಾ ಅವರಿಗೆ ಸಲ್ಲಬೇಕು” ಎಂದು ಶೆಹ್ಲಾ ರಶೀದ್ ಹೇಳಿದ್ದರು.
ಇದನ್ನೂ ಓದಿ: ಸಿಂಗಾಪುರ ಡೆಪ್ಯುಟಿ ಪಿಎಂ ಸಿತಾರ ಪ್ರೀತಿಗೆ ಪ್ರಧಾನಿ ಮೋದಿ ಶರಣು!
ಒಂದು ಕಾಲದಲ್ಲಿ ಮೋದಿಯ ಕಟ್ಟರ್ ವಿರೋಧಿ
ಶೆಹ್ಲಾ ರಶೀದ್ ಅವರು ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟರ್ ವಿರೋಧಿಯಾಗಿದ್ದರು. 2016ರಲ್ಲಿ ಜೆಎನ್‌ಯು ವಿವಿಯಲ್ಲಿ ‘ಟುಕ್ಡೆ ಟುಕ್ಡೆ ಗ್ಯಾಂಗ್’ ಘಟನೆ ನಡೆದ ಬಳಿಕ ಶೆಹ್ಲಾ ರಶೀದ್ ಚರ್ಚೆಯ ಮುನ್ನೆಲೆಗೆ ಬಂದರು. ಅಲ್ಲದೆ, 2019ರಲ್ಲಿ “ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯು ಭಯ ಹುಟ್ಟಿಸುತ್ತಿವೆ” ಎಂಬುದಾಗಿ ಟ್ವೀಟ್ ಮಾಡಿದ ಕಾರಣ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ, ಇದೇ ಶೆಹ್ಲಾ ರಶೀದ್ ಅವರು 370ನೇ ವಿಧಿ ರದ್ದು ತೀರ್ಮಾನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದರು. “ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಸುಧಾರಣೆಯಾಗುತ್ತಿದೆ” ಎಂದು ವಿಧಿ ರದ್ದು ತೀರ್ಮಾನವನ್ನು ಬೆಂಬಲಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ