ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳುವ ಜತೆಗೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಂವಿಧಾನ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿ ಕುಟುಂಬಸ್ಥರ ವಿರುದ್ಧ ನರೇಂದ್ರ ಮೋದಿ ಟೀಕಿಸಿದ್ದಾರೆ. “ನೆಹರು ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ನಾಲ್ಕು ಪೀಳಿಗೆಗಳು (Gandhi Family) ಸಂವಿಧಾನಕ್ಕೆ ಧಕ್ಕೆ ತಂದಿವೆ” ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದ ವೇಳೆ ಪ್ರಸ್ತಾಪಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 400ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಾಯಿಸುತ್ತದೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸುತ್ತಿವೆ ಎಂಬ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು. “ದೇಶದ ಸಂವಿಧಾನಕ್ಕೆ ಮೊದಲು ತಿದ್ದುಪಡಿ ತಂದಿದ್ದು ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರು. ಸಂವಿಧಾನಕ್ಕೆ ಧಕ್ಕೆ ತಂದವರು ಯಾರು ಎಂಬ ಪ್ರಶ್ನೆಯನ್ನು ಅವರಿಗೆ ಮೊದಲು ಕೇಳಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ತಿದ್ದುಪಡಿ ಮಾಡಿದರು. ಇದಾದ ಬಳಿಕ ಎಲ್ಲ ಪೀಳಿಗೆಗಳ ಕುಟುಂಬಸ್ಥರು ಹಲವು ರೀತಿಯಲ್ಲಿ ಸಂವಿಧಾನದ ಆಶಯಕ್ಕೆ ಧಕ್ಕೆ ತಂದರು” ಎಂದು ಹೇಳಿದರು.
I never want to venture into a 'Comfort Zone'. I see India's elections as one which will provide an opportunity to tirelessly serve 140 crore Indians. pic.twitter.com/6ZvJX1lwY4
— Narendra Modi (@narendramodi) May 17, 2024
“ಜವಾಹರ ಲಾಲ್ ನೆಹರು ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡಿದರು. ನೆಹರು ಅವರ ಪುತ್ರಿ ಇಂದಿರಾ ಗಾಂಧಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ನ್ಯಾಯಾಲಯದ ಆದೇಶವನ್ನೇ ಹಿಂದಕ್ಕೆ ತಳ್ಳಿದರು. ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿ ಅವರು ಶಾ ಬಾನೋ ಪ್ರಕರಣದಲ್ಲಿ ಕೋರ್ಟ್ ತೀರ್ಮಾನವನ್ನೇ ಬದಲಿಸಿದರು. ಇದಕ್ಕಾಗಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದರು. ಇನ್ನು ರಾಹುಲ್ ಗಾಂಧಿ ಅವರು ಮನಮೋಹನ್ ಸಿಂಗ್ ಸರ್ಕಾರವು 2013ರಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನೇ ಹರಿದುಹಾಕಿದರು. ಇದೆಲ್ಲ ಸಂವಿಧಾನಕ್ಕೆ ಗಾಂಧಿ ಕುಟುಂಬಸ್ಥರು ತಂದ ಧಕ್ಕೆಯಾಗಿದೆ” ಎಂದು ಮೋದಿ ವಾಗ್ದಾಳಿ ನಡೆಸಿದರು.
“ಹೀಗೆ ಜವಾಹರ ಲಾಲ್ ನೆಹರು ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ನಾಲ್ಕೂ ಪೀಳಿಗೆಗಳ ನಾಯಕರು ಸಂವಿಧಾನವನ್ನು ಒಂದಲ್ಲ ಒಂದು ರೀತಿಯಲ್ಲಿ ಹಾಳು ಮಾಡಿದ್ದಾರೆ. ಆದರೆ, ನಮ್ಮ ಸರ್ಕಾರವು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವುದಿಲ್ಲ. ಇದೇ ಕಾರಣಕ್ಕಾಗಿಯೇ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ನಾನು ಬಿಡುವುದಿಲ್ಲ ಎಂಬುದಾಗಿ ಹೇಳುತ್ತಿದ್ದೇನೆ” ಎಂದು ತಿಳಿಸಿದರು. “ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ. ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ರದ್ದುಗೊಳಿಸುತ್ತಾರೆ” ಎಂಬುದು ಕಾಂಗ್ರೆಸ್ ನಾಯಕರ ಆರೋಪವಾಗಿದೆ.
ಇದನ್ನೂ ಓದಿ: PM Narendra Modi: ಬುಲ್ಡೋಜರ್ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ