ನವದೆಹಲಿ: ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ (Lok Sabha Election) ನಡೆಯಲಿದೆ. ಚುನಾವಣೆ ಆಯೋಗವು ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದೆಡೆ ಬಿಜೆಪಿ ನಾಯಕರು ರಾಮಮಂದಿರ ಲೋಕಾರ್ಪಣೆಯ ಗುಂಗಿನಲ್ಲಿದ್ದಾರೆ. ರಾಮಮಂದಿರ ಕುರಿತು ಟೀಕಿಸುವವರಿಗೆ ತಿರುಗೇಟು ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕರು, ಸಚಿವ ಸಂಪುಟ ಸದಸ್ಯರಿಗೆ ಮಹತ್ವದ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. “ಸಚಿವರು ಸೇರಿ ಬಿಜೆಪಿಯ ಯಾವುದೇ ನಾಯಕರು ವಿವಾದಾತ್ಮಕ ಹೇಳಿಕೆ ನೀಡಬಾರದು” ಎಂಬುದಾಗಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಲೋಕಸಭೆ ಚುನಾವಣೆ ಮುಂದಿದೆ. ರಾಮಮಂದಿರ ಲೋಕಾರ್ಪಣೆಯೂ ನಡೆಯಲಿದೆ. ಹಾಗಾಗಿ, ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು. ಯಾವುದೇ ವಿವಾದಗಳಿಗೆ ಬಿಜೆಪಿ ನಾಯಕರು ಈಡಾಗಬಾರದು. ಇನ್ನು ಬಿಜೆಪಿ ಸಂಸದರು, ಸಚಿವರಂತೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೀಡು ಬಿಡಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಪ್ರತಿಪಕ್ಷಗಳ ನಾಯಕರು ಕೆರಳಿಸಿದರೂ ವಿವಾದಾತ್ಮಕ ಹೇಳಿಕೆಗಳಿಂದ ದೂರ ಇರಬೇಕು” ಎಂಬುದಾಗಿ ಸೂಚಿಸಿದ್ದಾರೆ ಎನ್ನಲಾಗಿದೆ.
ಅಭ್ಯರ್ಥಿಗಳ ಮೊದಲ ಪಟ್ಟಿ ಯಾವಾಗ?
ಜನವರಿ ತಿಂಗಳ ಕೊನೆಯಲ್ಲಿ ಬಿಜೆಪಿಯು ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರೀಯ ಚುನಾವಣೆ ಸಮಿತಿಯು ಜನವರಿ ಅಂತ್ಯದಲ್ಲಿ ಸಭೆ ನಡೆಸಲಿದ್ದು, ಸುಮಾರು 150-160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಾರಿ 70 ವರ್ಷ ದಾಟಿದವರಿಗೆ ಟಿಕೆಟ್ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ, ಸುಲಭವಾಗಿ ಗೆಲ್ಲುವ, ವರ್ಚಸ್ಸು ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದು ಬಿಜೆಪಿ ರಣತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: PM Narendra Modi: ‘ರಾಮ್ ಆಯೇಂಗೆ…’ ಭಜನೆಗೆ ಪ್ರಧಾನಿ ನರೇಂದ್ರ ಮೋದಿ ಫುಲ್ ಫಿದಾ!
ಬಿಜೆಪಿಯು ಈ ಬಾರಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದೆ. ಕಳೆದ ಬಾರಿ 437 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಯು ಈ ಬಾರಿ ಇದಕ್ಕಿಂತ ಹೆಚ್ಚು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಹಾಗಾಗಿಯೇ, ಮೊದಲು ಸುಲಭವಾಗಿ ಜಯ ಸಾಧಿಸುವ ವಿಶ್ವಾಸ ಇರುವ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲಿದೆ. ನಂತರ ಲೆಕ್ಕಾಚಾರದ ಆಧಾರದ ಮೇಲೆ ಟಿಕೆಟ್ ಘೋಷಿಸುತ್ತದೆ ಎನ್ನಲಾಗಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಮಿತ್ರ ಪಕ್ಷಗಳ ಜತೆಗೆ ಬಿಜೆಪಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ