Site icon Vistara News

Narendra Modi: ಶಿಂಧೆ, ಅಜಿತ್‌ ಬಣಕ್ಕೆ ನೀವೇ ಸೇರಿಬಿಡಿ; ಠಾಕ್ರೆ, ಶರದ್‌ ಪವಾರ್‌ಗೆ ಮೋದಿ ಸಲಹೆ!

Narendra Modi

Needs Investigation: PM Narendra Modi On Pakistan's Support For Rahul Gandhi, Arvind Kejriwal

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಹರಿದು ಹಂಚಿ ಹೋಗಿರುವ ಕಾರಣ ಈ ಬಾರಿಯ ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶವು ತೀವ್ರ ಕುತೂಹಲ ಕೆರಳಿಸಿದೆ. ಶಿವಸೇನೆಯನ್ನು ಇಬ್ಭಾಗ ಮಾಡಿದ ಏಕನಾಥ್‌ ಶಿಂಧೆ ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಶರದ್‌ ಪವಾರ್‌ (Sharad Pawar) ನೇತೃತ್ವದ ಎನ್‌ಸಿಪಿಯನ್ನು ಒಡೆದ ಅಜಿತ್‌ ಪವಾರ್‌ (Ajit Pawar) ಈಗ ಉಪ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ, ರಾಜ್ಯದ ಎರಡು ಪ್ರಮುಖ ಪಕ್ಷಗಳೀಗ ಹರಿದು ಹಂಚಿ ಹೋಗಿವೆ. ಇದರ ಮಧ್ಯೆಯೇ, ಉದ್ಧವ್‌ ಠಾಕ್ರೆ (Uddhav Thackeray) ಬಣದ ಶಿವಸೇನೆಗೆ ಹಾಗೂ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ನರೇಂದ್ರ ಮೋದಿ (Narendra Modi) ಹೊಸ ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದ ನಂದುರ್‌ಬರ್‌ನಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಎನ್‌ಸಿಪಿ ಹಾಗೂ ಶಿವಸೇನೆಗೆ ಪರೋಕ್ಷವಾಗಿ ಚಾಟಿ ಬೀಸಿದರು. ಹಾಗೆಯೇ ಸಲಹೆಯನ್ನೂ ನೀಡಿದರು. “ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು, ಚುನಾವಣೆ ಫಲಿತಾಂಶದ ಬಳಿಕ ನರಳುವ ಬದಲು ಏಕನಾಥ್‌ ಶಿಂಧೆ ಬಣದ ಶಿವಸೇನೆ ಹಾಗೂ ಅಜಿತ್‌ ಪವಾರ್‌ ಬಣದ ಎನ್‌ಸಿಪಿ ಜತೆ ವಿಲೀನ ಘೋಷಿಸುವುದು ಉತ್ತಮ” ಎಂಬುದಾಗಿ ಪರೋಕ್ಷವಾಗಿ ಉದ್ಧವ್‌ ಠಾಕ್ರೆ ಹಾಗೂ ಶರದ್‌ ಪವಾರ್‌ ಅವರಿಗೆ ಸಲಹೆ ನೀಡಿದರು.

ನಕಲಿ ಪಕ್ಷಗಳು ಎಂದು ವಾಗ್ದಾಳಿ

ಶರದ್‌ ಪವಾರ್‌ ಅವರ ಎನ್‌ಸಿಪಿ ಹಾಗೂ ಉದ್ಧವ್‌ ಠಾಕ್ರೆ ಅವರ ಶಿವಸೇನೆಯನ್ನು ನರೇಂದ್ರ ಮೋದಿ ಅವರು ನಕಲಿ ಪಕ್ಷಗಳು ಎಂದು ಜರಿದರು. “ರಾಜ್ಯದಲ್ಲಿ ಕಳೆದ 40-50 ವರ್ಷದಿಂದ ರಾಜಕೀಯ ಮಾಡುತ್ತಿರುವ ಪ್ರಮುಖ ನಾಯಕರೊಬ್ಬರು ಬಾರಾಮತಿ ಲೋಕಸಭೆ ಕ್ಷೇತ್ರದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಜೂನ್‌ 4ರ ನಂತರ ಸಣ್ಣ ಪಕ್ಷಗಳು ಕಾಂಗ್ರೆಸ್‌ ಜತೆ ವಿಲೀನವಾಗಲಿವೆ ಎಂಬುದಾಗಿ ಹೇಳಿದ್ದಾರೆ. ಇದರ ಅರ್ಥವು ನಕಲಿ ಎನ್‌ಸಿಪಿ ಹಾಗೂ ನಕಲಿ ಶಿವಸೇನೆಯು ಕಾಂಗ್ರೆಸ್‌ ಜತೆ ವಿಲೀನ ಮಾಡಿಕೊಳ್ಳುತ್ತವೆ ಎಂಬುದಾಗಿದೆ. ಇದರ ಬದಲು ಅಜಿತ್‌ ಹಾಗೂ ಶಿಂಧೆ ಬಣಗಳೊಂದಿಗೆ ವಿಲೀನಗೊಳಿಸುವುದು ಉತ್ತಮ” ಎಂದು ಹೇಳಿದರು.

ಶರದ್‌ ಪವಾರ್‌ ಹೇಳಿದ್ದೇನು?

ಮಹಾರಾಷ್ಟ್ರದ ಸಣ್ಣ ಪಕ್ಷಗಳು ಕಾಂಗ್ರೆಸ್‌ ಜತೆ ವಿಲೀನಗೊಳ್ಳಲಿವೆ ಎಂಬುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದ ವೇಳೆ ಎನ್‌ಸಿಪಿ ವರಿಷ್ಠ ನಾಯಕ ಶರದ್‌ ಪವಾರ್‌ ಹೇಳಿದ್ದರು. “ಮುಂದಿನ ಎರಡು ವರ್ಷಗಳಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಜತೆ ವಿಲೀನಗೊಳ್ಳಲಿವೆ ಇಲ್ಲವೇ ವಿಲೀನಗೊಳಿಸಲು ಚಿಂತನೆ ನಡೆಸಲಿವೆ. ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕಾಗಿ ಇಂತಹ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ” ಎಂದು ಹೇಳಿದ್ದರು. ಹಾಗಾಗಿ, ಮೋದಿ ಅವರು ಶರದ್‌ ಪವಾರ್‌ ಹಾಗೂ ಉದ್ಧವ್‌ ಠಾಕ್ರೆ ಅವರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Rahul Gandhi: “ಅದಾನಿ-ಅಂಬಾನಿ… ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Exit mobile version