ದೆಹಲಿ: 370 ನೇ (Article 370) ವಿಧಿಯನ್ನು ರದ್ದುಗೊಳಿಸಿರುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಐತಿಹಾಸಿಕ. ಇದು ಪ್ರಗತಿಯ, ಏಕತೆಯ ಅದ್ಭುತ ಉದ್ಘೋಷ… ಇದು, ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂಧ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ ಪ್ರತಿಕ್ರಿಯೆ. ಅವರು ತಮ್ಮ ಎಕ್ಸ್ ಖಾತೆಯ ಮೂಲಕ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ಏಕತೆಯ ಮೂಲ ತತ್ವವನ್ನು ಬಲಪಡಿಸುವ ತೀರ್ಪು ಇದಾಗಿದೆ ಎಂದು ಹೇಳಿಕೊಂಡಿದ್ದಾರೆ.
Today's Supreme Court verdict on the abrogation of Article 370 is historic and constitutionally upholds the decision taken by the Parliament of India on 5th August 2019; it is a resounding declaration of hope, progress and unity for our sisters and brothers in Jammu, Kashmir and…
— Narendra Modi (@narendramodi) December 11, 2023
ಮೋದಿಯವರ ಟ್ವೀಟ್ ಸಾರಾಂಶ ಇಲ್ಲಿದೆ
370 ನೇ ವಿಧಿಯನ್ನು ರದ್ದುಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪು ಐತಿಹಾಸಿಕವಾಗಿದೆ ಮತ್ತು 2019 ರ ಆಗಸ್ಟ್ 5 ರಂದು ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಸಾಂವಿಧಾನಿಕವಾಗಿ ಎತ್ತಿಹಿಡಿಯಲಾಗಿದೆ. ಇದು ಜಮ್ಮು, ಕಾಶ್ಮೀರ ಮತ್ತು ಲಡಾಖ್ ನ ಸಹೋದರ ಸಹೋದರಿಯರಿಗೆ ಭರವಸೆ, ಪ್ರಗತಿ ಮತ್ತು ಏಕತೆಯ ಭರವಸೆಯಾಗಿದೆ. ನ್ಯಾಯಾಲಯವು ತನ್ನ ಆಳವಾದ ವಿವೇಕದ ಮೂಲಕ ಭಾರತೀಯರಾದ ನಾವು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುವ ಏಕತೆಯ ಮೂಲತತ್ವವನ್ನು ಪ್ರತಿಪಾದಿಸಿದೆ.
ನಿಮ್ಮ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆ ಅಚಲವಾಗಿ ಉಳಿದಿದೆ ಎಂದು ಜಮ್ಮು, ಕಾಶ್ಮೀರ ಮತ್ತು ಲಡಾಖ್ನ ಜನರಿಗೆ ನಾನು ಭರವಸೆ ನೀಡಲು ಬಯಸುತ್ತೇನೆ. ಪ್ರಗತಿಯ ಫಲಗಳು ನಿಮಗೆ ತಲುಪುವುದಲ್ಲದೆ, 370 ನೇ ವಿಧಿಯಿಂದ ತೊಂದರೆ ಅನುಭವಿಸಿದ ನಮ್ಮ ಸಮಾಜದ ಅತ್ಯಂತ ದುರ್ಬಲ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಪ್ರಯೋಜನಗಳನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ.
ಇದನ್ನೂ ಓದಿ: Article 370: ʼಗಾಯಗಳು ಗುಣವಾಗಲಿ…ʼ ಕಾಶ್ಮೀರಿ ಪಂಡಿತ ಕುಟುಂಬದ ನ್ಯಾ.ಎಸ್‌ಕೆ ಕೌಲ್ ಕೋರ್ಟ್ ಪೀಠದಿಂದ ಹೇಳಿದ್ದೇನು?
ಇಂದಿನ ತೀರ್ಪು ಕೇವಲ ಕಾನೂನು ತೀರ್ಪು ಅಲ್ಲ; ಇದು ಭರವಸೆಯ ದೀಪವಾಗಿದೆ, ಉಜ್ವಲ ಭವಿಷ್ಯದ ಭರವಸೆ ಮತ್ತು ಬಲವಾದ, ಹೆಚ್ಚು ಏಕೀಕೃತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಕೋರ್ಟ್ ಏನು ಹೇಳಿದೆ?
ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಾರ್ವಭೌಮತ್ವವಿಲ್ಲ, ಭಾರತದ ಸಂವಿಧಾನದೊಳಗೆ ಜಮ್ಮು ಕಾಶ್ಮೀರದ ಸಂವಿಧಾನವು ಕಾರ್ಯ ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತದೊಳಗೆ ಸೇರಿದ ನಂತರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆರ್ಟಿಕಲ್ 370 ಅದನ್ನು ಭಾರತದೊಳಕ್ಕೆ ಸೇರಿಸಲು ನೀಡಲಾದ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವವಿಲ್ಲ. ರಾಜ್ಯವು ಸಾರ್ವಭೌಮತ್ವದ ಯಾವುದೇ ಅಂಶವನ್ನು ಉಳಿಸಿಕೊಂಡಿಲ್ಲ. ಆರ್ಟಿಕಲ್ 370 ಅಸಮ ಒಕ್ಕೂಟದ ಲಕ್ಷಣವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಗಮನಿಸಿದರು.
ಅರ್ಜಿದಾರರು ರಾಷ್ಟ್ರಪತಿಗಳ ಘೋಷಣೆಯನ್ನು ಪ್ರಶ್ನಿಸಿಲ್ಲ. ಆರ್ಟಿಕಲ್ 370 ರದ್ದತಿ ಘೋಷಣೆಯ ನಂತರದ ಅಧ್ಯಕ್ಷರ ಅಧಿಕಾರ ಚಲಾವಣೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ರಾಜ್ಯ ವಿಧಾನಸಭೆಯ ಪರವಾಗಿ ಅಧಿಕಾರವನ್ನು ಚಲಾಯಿಸಲು ಆರ್ಟಿಕಲ್ 356(1) ರ ಅಡಿಯಲ್ಲಿ ಸಂಸತ್ತಿನ ಅಧಿಕಾರವು ಕಾನೂನು ರಚನೆಯ ಅಧಿಕಾರಗಳಿಗೆ ಸೀಮಿತವಾಗಿಲ್ಲ ಎಂದಿರುವ ಕೋರ್ಟ್, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ಎತ್ತಿ ಹಿಡಿದಿದೆ.
ಕೇಂದ್ರದ ಒಪ್ಪಿಗೆಯೊಂದಿಗೆ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ರಾಷ್ಟ್ರಪತಿಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಬಹುದಿತ್ತು. ಮತ್ತು ರಾಜ್ಯ ವಿಧಾನಸಭೆಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಈ ಮೂಲಕ ಅರ್ಜಿದಾರರ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ಜಮ್ಮು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯನ್ನು ಮರಳಿಸುವುದಕ್ಕಾಗಿ 2024ರ ಸೆಪ್ಟೆಂಬರ್ ಒಳಗೆ ವಿಧಾನಸಭೆ ಚುನಾವಣೆಯನ್ನು ನಡೆಸಬೇಕು. ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗನೆ ಪ್ರತಿಷ್ಠಾಪಿಸಬೇಕು ಎಂದು ಕೋರ್ಟ್ ಆದೇಶಿಸಿದೆ.