ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಭಾನುವಾರ ನಡೆದ ಸದ್ಭಾವನಾ ಕಾರ್ಯಕ್ರಮವೊಂದರಲ್ಲಿ ನಾನಾ ಧಾರ್ಮಿಕ ಸಮುದಾಯಗಳ ಚಿಂತಕರು ಮತ್ತು ಪ್ರಮುಖರು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಸರ್ವ ಧರ್ಮ ಸಮ ಭಾವ ನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (Ability to respect all communities) ಎನ್‌ಐಡಿ ಫೌಂಡೇಷನ್ ಮೆಲ್ಬೋರ್ನ್‌ನ ಬುಂಜಿಲ್ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾನಾ ಧಾರ್ಮಿಕ ನಾಯಕರು, ಚಿಂತಕರು, ಬೋಧಕರು ಮತ್ತು ಸಂಶೋಧಕರು ಭಾಗವಹಿಸಿದ್ದರು.
ಆಸ್ಟ್ರೇಲಿಯಾದ ಸಂಸದ ಜಾಸನ್ ವುಡ್ ಮಾತನಾಡಿ, ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನಾನಾ ಮತ ಪಂಥ, ನಂಬಿಕೆಗಳ ನಾಯಕರು ಒಂದುಗೂಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮ ಮಾದರಿ ಎಂದರು.
ಎನ್‌ಐಡಿ ಫೌಂಡೇಷನ್‌ನ ಮುಖ್ಯಸ್ಥ ಸರ್ದಾರ್ ಶಂತನು ಸಿಂಗ್ ಸಂಧು ಅವರು ಸಿಖ್ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕೊಡುಗೆಗಳನ್ನು ವಿವರಿಸುವ ಹಾರ್ಟ್‌ಫೆಲ್ಟ್ ಲೆಗಸಿ ಟು ದ ಫೈತ್ (Heartfelt legacy to the faith) ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ಕಳೆದ 9 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಬೆಳೆಯುವ ನಿಟ್ಟಿನಲ್ಲಿ ದಾಪುಗಾಲಿಕ್ಕಿದೆ. ವಿಶ್ವದ 5ನೇ ಅತಿ ದೊಡ್ಡ ಎಕಾನಮಿಯಾಗಿದೆ. ಇತರ ಹಲವು ದೇಶಗಳಂತೆ ಭಾರತದಲ್ಲೀ ಎಲ್ಲ ಧರ್ಮಗಳು ಮತ್ತು ಸಮುದಾಯಗಳು ಪೂರ್ಣ ಸ್ವಾತಂತ್ರ್ಯದಿಂದ ಅಸ್ತಿತ್ವದಲ್ಲಿವೆ. ಯಾವುದೇ ತಾರತಮ್ಯ ನೀಡದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವತಂತ್ರ ಭಾರತದ ಅತ್ಯಂತ ಸೆಕ್ಯುಲರ್ ಮತ್ತು ಪ್ರಗತಿಪರ ಪ್ರಧಾನಿಯಾಗಿದ್ದಾರೆ ಎಂದು ಶಂತನು ಸಿಂಗ್ ಸಂಧು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಬಾಂಧವ್ಯ ಸುಧಾರಿಸಿದೆ. ಇತ್ತೀಚೆಗೆ ಉಭಯ ರಾಷ್ಟ್ರಗಳ ಜತೆಗೆ ಕ್ರಿಕೆಟ್ ಡಿಪ್ಲೊಮಸಿ ಕೂಡ ನಡೆದಿರುವುದನ್ನು ಕಾಣಬಹುದು. ಭಾರತೀಯ ಪ್ರಜಾಪ್ರಭುತ್ವದಲ್ಲಿ ಭಿನ್ನ ಸಮುದಾಯಗಳು ಪರಸ್ಪರರ ಹಬ್ಬಗಳಲ್ಲಿ ಉತ್ಸಾಹದಿಂದ ಭಾಗವಹಿಸುವುದು ಸಾಮಾನ್ಯ. ಅಂಥ ವಾತಾವರಣ ಅಲ್ಲಿದೆ ಎಂದರು.
ಬಾಪ್ಸ್ ಸಂಸ್ಥೆಯ ಟ್ರಸ್ಟಿ ಸೀತೇಶ್ ಭೋಜಾನಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಭಾರತವನ್ನು ಮಾತ್ರ ಒಂದುಗೂಡಿಸುತ್ತಿಲ್ಲ. ಇಡೀ ವಿಶ್ವವನ್ನು ಒಂದು ಕುಟುಂಬವಾಗಿ ಭಾವಿಸಿದ್ದಾರೆ. ಭಾರತೀಯ ಸಂಸ್ಕೃತಿ ಬಗ್ಗೆ ಜಗತ್ತಿನ ಇಮೇಜ್ ಅನ್ನು ಅವರು ಬದಲಿಸಿದ್ದಾರೆ. ಯೋಗದ ಮೂಲಕ ಪ್ರಾಚೀನ ನಾಗರಿಕತೆಯ ಮಹತ್ವವನ್ನು ಪಸರಿಸಿದ್ದಾರೆ. ಇಂದು 120 ದೇಶಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ ಎಂದು ವಿವರಿಸಿದರು.