ನವ ದೆಹಲಿ: ನೀತಿ ಆಯೋಗದ ಆಡಳಿತ ಮಂಡಳಿ ಏಳನೇ ಸಭೆ ಇಂದು ಫಲಪ್ರದವಾಗಿ ನಡೆಯಿತು. ರಾಜ್ಯಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು ಪಾಲ್ಗೊಂಡು, ತಮ್ಮ ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲಾದ ವಿಶೇಷ ಯೋಜನೆಗಳು, ವ್ಯವಸ್ಥೆಗಳ ಬಗ್ಗೆ ಪ್ರಸ್ತುತಪಡಿಸಿದರು ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್ ಅಯ್ಯರ್ ತಿಳಿಸಿದರು.
ಈ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷಿ ವೈವಿಧ್ಯತೆ, ಖಾದ್ಯತೈಲಗಳಲ್ಲಿ ಸ್ವಾಲಂಬನೆ ಸಾಧಿಸುವ ಅಗತ್ಯತೆ ಬಗ್ಗೆ ವಿವರಿಸಿದರು. ನಮಗೆ ಅಗತ್ಯವಿರುವಷ್ಟು ಖಾದ್ಯ ತೈಲ ಆಮದಿನಿಂದಲೂ ಪೂರೈಕೆಯಾಗುತ್ತಿಲ್ಲ. ಅಗತ್ಯದ ಅರ್ಧ ಭಾಗದಷ್ಟು ಮಾತ್ರ ಲಭ್ಯವಾಗುತ್ತಿದೆ. ಈ ಬಗ್ಗೆ ನಾವು ಗಮನಹರಿಸುತ್ತಿದ್ದೇವೆ ಮತ್ತು ರಾಜ್ಯಗಳೂ ಕೂಡ ಸಹಕಾರ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾಗಿ ಚಿಂತಕ ರಮೇಶ್ ಚಾಂದ್ ಅವರು ಸಭೆಯ ಬಳಿಕ ಮಾಹಿತಿ ನೀಡಿದರು. ಹಾಗೇ, ಸಭೆಯಲ್ಲಿ 2020ರ ರಾಷ್ಟ್ರೀಯ ಶಿಕ್ಷಣ ನೀತಿ, ಜಿ20 ಮತ್ತು ಇತರ ವಸ್ತುಗಳ ರಫ್ತು ಪ್ರಕ್ರಿಯೆ ಬಗ್ಗೆಯೂ ಚರ್ಚೆ ನಡೆಯಿತು ಎಂದು ತಿಳಿಸಿದರು.
ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ ಮಾತನಾಡಿ, ‘ಕೊವಿಡ್ 19 ಸಾಂಕ್ರಾಮಿಕದ ಹೊತ್ತಲ್ಲಿ ರಾಜ್ಯಗಳು ತೋರಿಸಿದ ಸಹಕಾರ-ಒಗ್ಗಟ್ಟನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಭಾರತದ ಒಗ್ಗಟ್ಟು ಜಗತ್ತಿಗೇ ಮಾದರಿಯಾಗಿದೆ. ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭಾರತ ಒಂದು ಪ್ರಬಲ ಸಂದೇಶವನ್ನು ಕೊಟ್ಟಿದ್ದಾಗಿ ನರೇಂದ್ರ ಮೋದಿ ಹೇಳಿದ್ದಾರೆ‘ ಎಂದು ಮಾಹಿತಿ ನೀಡಿದರು.
ಇಂದಿನ ಸಭೆಯ ನಾಲ್ಕು ಪ್ರಮುಖ ಅಜೆಂಡಾಗಳು
1. ಬೆಳೆ ವೈವಿಧ್ಯೀಕರಣ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಇತರ ಕೃಷಿ ಸರಕುಗಳಲ್ಲಿ ಸ್ವಾವಲಂಬನೆ ಸಾಧಿಸುವುದು.
2. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (2020) ಅನುಷ್ಠಾನ
3. ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ
4. ನಗರಾಡಳಿತ
ರಾಜ್ಯಗಳ ಪಾಲು ಹೆಚ್ಚಿಸಿ
ಇಂದಿನ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿಗಳು ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ. ಅದರಲ್ಲಿ ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮಾತನಾಡಿ, ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯಗಳ ಪಾಲನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಹಾಗೇ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವೆ ಬರುವ ಮನಸ್ತಾಪ-ವಿವಾದ ಬಗೆಹರಿಸುವ ಕೆಲಸವನ್ನು ನೀತಿ ಆಯೋಗ ಮಾಡಬಹುದು. ಒಂಬುಡ್ಸ್ಮನ್ ಕಾರ್ಯ ನಿರ್ವಹಿಸಬಹುದು ಎಂಬ ಸಲಹೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೀಡಿದ್ದಾರೆ.
ಇದನ್ನೂ ಓದಿ: NITI Aayog Meet | ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ; ನಿತೀಶ್ ಕುಮಾರ್, ಬೊಮ್ಮಾಯಿ ಗೈರು