ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಸ್ವಭಾವತಃ ಹಾಸ್ಯ ಪ್ರಜ್ಞೆ ಉಳ್ಳವರು. ತಮ್ಮಲ್ಲಿರುವ ಹಾಸ್ಯ ಪ್ರವೃತ್ತಿಯನ್ನು ಅವರು ಪ್ರತಿಪಕ್ಷಗಳನ್ನು ಗೇಲಿ ಮಾಡಲು ಸಹ ಆಗಾಗ ಬಳಸಿಕೊಳ್ಳುತ್ತಾರೆ. ಹಾಗೇ, ಇಂದು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡುವಾಗ ಕೂಡ ಪ್ರಧಾನಿ ನರೇಂದ್ರ ಮೋದಿ ಒಂದು ಚಿಕ್ಕ ಹಾಸ್ಯಭರಿತ ಕತೆ ಮೂಲಕ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳನ್ನು ಛೇಡಿಸಿದರು.
‘ಇಬ್ಬರು ಸ್ನೇಹಿತರು ಪರ್ವತ ಏರಲು ಹೊರಟರು. ಯಾವುದಾದರೂ ಕಾಡು ಪ್ರಾಣಿ ಬಂದರೆ ಬೇಕು ಎಂದು ಒಂದು ಬಂದೂಕು ತೆಗೆದುಕೊಂಡು ಗಾಡಿಯಲ್ಲಿ ಹೋಗಿದ್ದರು. ಆದರೆ ವಾಹನ ನಿಲ್ಲಿಸಿ, ಇಳಿಯುವಾಗ ಬಂದೂಕನ್ನು ಅಲ್ಲಿಯೇ ಬಿಟ್ಟು ಹೋದರು. ಬಳಿಕ ಗುಡ್ಡ ಹತ್ತುವಾಗ ಹುಲಿಯೊಂದು ಎದುರಿಗೆ ಬಂತು. ಆಗ ಆ ಸ್ನೇಹಿತರು, ಹುಲಿಯ ಎದುರು ಬಂದೂಕಿನ ಲೈಸೆನ್ಸ್ ಹಿಡಿದು, ನೋಡು ನಮ್ಮತ್ರ ಬಂದೂಕಿನ ಲೈಸೆನ್ಸ್ ಇದೆ ಎಂದು ತೋರಿಸಿದರು’ ಎಂದು ಪ್ರಧಾನಿ ಮೋದಿ ಒಂದು ಪುಟ್ಟ ಕತೆಯನ್ನು ಹೇಳಿದರು. ಮೋದಿಯವರ ಈ ಮಾತುಗಳಿಂದ ಸದನ ನಗೆಗಡಲಲ್ಲಿ ತೇಲಿತು. ಪ್ರತಿಪಕ್ಷಗಳ ಸ್ಥಿತಿಯೂ ಹೀಗೆ ಎಂಬರ್ಥದಲ್ಲಿ ನರೇಂದ್ರ ಮೋದಿ ಈ ಮಾತುಗಳನ್ನಾಡಿದರು. ಅದರಲ್ಲೂ ಕಾಂಗ್ರೆಸ್ ಮಾಡುತ್ತಿರುವ ನಿರುದ್ಯೋಗ ಸಮಸ್ಯೆ ಆರೋಪ ಮತ್ತು ಯುಪಿಎ ಸರ್ಕಾರ ಇದ್ದಾಗ ಜಾರಿಗೊಳಿಸಿದ ಮನರೇಗಾ ಯೋಜನೆ ಬಗ್ಗೆ ಅವರು ಈ ಕತೆ ಹೇಳಿದರು.
ಇದನ್ನೂ ಓದಿ: PM Modi Parliament Speech: ಈಗ ಬೇರೆ ದೇಶಗಳು ಭಾರತವನ್ನು ಅವಲಂಬಿಸಿವೆ! ನಮ್ಮದು 5ನೇ ದೊಡ್ಡ ಆರ್ಥಿಕತೆ: ಮೋದಿ
ಜನವರಿ 31ರಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಇಂದು ಪ್ರಧಾನಿ ಮೋದಿ ಉತ್ತರಿಸಿದರು. ಹಾಗೇ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಪ್ರತಿಪಕ್ಷಗಳು ನನ್ನ ವಿರುದ್ಧ ಅದೆಷ್ಟೇ ನಿಂದನೆ, ಆರೋಪಗಳನ್ನು ಮಾಡಿದರೂ ಅದನ್ನು ಈ ದೇಶದ ಜನರು ನಂಬುವುದಿಲ್ಲ. ನಾನು 25ವರ್ಷಗಳಿಂದ ಈ ದೇಶಕ್ಕಾಗಿ ದುಡಿಯುತ್ತಿದ್ದೇನೆ. ನಾನು ಜನರಿಂದ ಗಳಿಸಿಕೊಂಡಿರುವ ನಂಬಿಕೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.