ನವದೆಹಲಿ: ಕೆಂಪು ಕೋಟೆ ಮೇಲೆ ನಿಂತು ಒಂದೂವರೆ ಗಂಟೆ ಸ್ವಾತಂತ್ರ್ಯೋತ್ಸವದ (Independence Day 2023) ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Speech), ಅಭಿವೃದ್ಧಿ ವಿಷಯಗಳು, ಭಾರತದ ದೂರದೃಷ್ಟಿ, 2014ರಿಂದ ನೀಡಿದ ಆಡಳಿತ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಇನ್ನು ಭಾಷಣದ ಮಧ್ಯೆ ಪರಿವಾರವಾದದ ವಿರುದ್ಧ ಗುಡುಗಿದ ಅವರು ಪ್ರತಿಪಕ್ಷಗಳಿಗೆ ಸಂದೇಶವನ್ನೂ ರವಾನಿಸಿದರು. ಅದರಲ್ಲೂ ಪರಿವಾರವಾದದ ಹೆಸರು ಉಲ್ಲೇಖಿಸಿ ಕಾಂಗ್ರೆಸ್‌ಗೆ ಪರೋಕ್ಷವಾಗಿ ಚಾಟಿ ಬೀಸಿದರು.
“ಪರಿವಾರವಾದವು ದೇಶದ ಅಭಿವೃದ್ಧಿಗೆ ಅಡ್ಡಗಾಲು ಆಗುತ್ತದೆ. ಪ್ರತಿಭೆ, ಪರಿಶ್ರಮವನ್ನು ಪರಿವಾರವಾದಿಗಳು ನುಂಗಿ ಹಾಕುತ್ತಾರೆ. ಕುಟುಂಬದ ಪಕ್ಷವು, ಕುಟುಂಬದಿಂದ ಹಾಗೂ ಕುಟುಂಬಕ್ಕೋಸ್ಕರ ದುಡಿಯುವ ಪಕ್ಷವಾಗಿರುತ್ತದೆಯೇ ಹೊರತು, ಜನರ ಏಳಿಗೆಗೆ ದುಡಿಯುವುದಿಲ್ಲ. ಪರಿವಾರವಾದ ಹಾಗೂ ತುಷ್ಟೀಕರಣವು ದೇಶಕ್ಕೆ ಮಾರಕವಾಗಿವೆ. ಒಂದು ರಾಜಕೀಯ ಪಕ್ಷವನ್ನು ಒಂದೇ ಕುಟುಂಬವು ಹೇಗೆ ಮುನ್ನಡೆಸಲು ಸಾಧ್ಯ? ಹಾಗಾಗಿ, ದೇಶದ ಜನರು ಭ್ರಷ್ಟಾಚಾರ, ತುಷ್ಟೀಕರಣ ಹಾಗೂ ಪರಿವಾರವಾದದ ವಿರುದ್ಧ ಹೋರಾಡಬೇಕು” ಎಂದು ನರೇಂದ್ರ ಮೋದಿ ಕರೆ ನೀಡಿದರು.
ಇದನ್ನೂ ಓದಿ: Independence Day 2023: ವಿಶ್ವಕರ್ಮ ಯೋಜನೆ, ಮಹಿಳಾ ಸ್ವಸಹಾಯ ಸಂಘ ಘೋಷಿಸಿದ ಮೋದಿ; ಏನಿವು? ಯಾರಿಗೆ ಉಪಯೋಗ?
ಕನಸಲ್ಲೂ ಅಭಿವೃದ್ಧಿಯ ಜಪ
ನನ್ನ ಮೇಲೆ ನೀವು ಭರವಸೆ ಇಟ್ಟು 2014ರಲ್ಲಿ ಪ್ರಧಾನಿ ಮಾಡಿದಿರಿ. ನಾನು ಪ್ರಧಾನಿಯಾದ ಬಳಿಕ ಪ್ರತಿಪಕ್ಷಣವೂ ನಿಮ್ಮ ಏಳಿಗೆಗಾಗಿ ಶ್ರಮಿಸಿದ್ದೇನೆ. ನನ್ನ ಕನಸಿನಲ್ಲೂ ದೇಶದ ಜನ, ಅಭಿವೃದ್ಧಿಯೇ ನೆನಪಾಗುತ್ತದೆ. ಮುಂದಿನ ದಿನಗಳಲ್ಲೂ ನಾನು ಇದನ್ನೇ ಮಾಡುತ್ತೇನೆ. ಇನ್ನು 140 ಕೋಟಿ ಜನರು ದೇಶದ ಏಳಿಗೆಗೆ ಶ್ರಮಿಸೋಣ. ದೇಶಕ್ಕಾಗಿ ಮಡಿದರು ಎಂದು ನಾವು ಇತಿಹಾಸದಿಂದ ತಿಳಿದಿದ್ದೇವೆ. ಆದರೆ, 2047ರ ವೇಳೆಗೆ ದೇಶವನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸಲು ದೇಶಕ್ಕಾಗಿ ಬದುಕೋಣ, ದೇಶಕ್ಕಾಗಿ ದುಡಿಯೋಣ ಎಂದರು.
ಮನಮೋಹನ್ ಸಿಂಗ್ ದಾಖಲೆ ಸರಿಗಟ್ಟಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಸತತ 10ನೇ ಬಾರಿಗೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡುವ ಮೂಲಕ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದರು. ಯುಪಿಎ ಮೊದಲ ಹಾಗೂ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಸತತ 10 ವರ್ಷ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದ್ದರು. ಈ ದಾಖಲೆಯನ್ನು ಮೋದಿ ಸರಿಗಟ್ಟಿದರು.