Site icon Vistara News

Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ

Narendra Modi And Bill Gates

PM Narendra Modi, Bill Gates Discuss AI Role, Digital Revolution In India

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಸಿದ್ಧತೆ, ಪ್ರಚಾರದ ಭರಾಟೆಯ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ (Bill Gates) ಅವರೊಂದಿಗೆ ಮಾತುಕತೆ ನಡೆಸಿದರು. ದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಇಬ್ಬರೂ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಭಾರತದ ಅಭಿವೃದ್ಧಿ, ಕೃತಕ ಬುದ್ಧಿಮತ್ತೆಯ ಬಳಕೆ, ತಂತ್ರಜ್ಞಾನದ ಬಳಕೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ಇದೇ ವೇಳೆ, ಬಿಲ್‌ ಗೇಟ್ಸ್‌ ಅವರು ಭಾರತದ ಡಿಜಿಟಲ್‌ ತಂತ್ರಜ್ಞಾನದ ಅಳವಡಿಕೆ, ಜಾರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಎಐ ಬಳಕೆಯ ಮಹತ್ವ ವಿವರಿಸಿದ ಮೋದಿ

ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆ, ಪ್ರಾಮುಖ್ಯತೆ ಕುರಿತು ನರೇಂದ್ರ ಮೋದಿ ಅವರು ಬಿಲ್‌ ಗೇಟ್ಸ್‌ ಅವರಿಗೆ ವಿವರಿಸಿದರು. “ಭಾರತದಲ್ಲಿ ಜನಿಸುವ ಮಕ್ಕಳೀಗ ಆಯ್‌ (Aai) ಎಂದು ಹೇಳುವ ಜತೆಗೆ ಎಐ (AI) ಎಂದು ಕೂಡ ಹೇಳುತ್ತವೆ. ಇನ್ನು ಜಿ-20 ಶೃಂಗಸಭೆಯಲ್ಲಿ ಭಾಷಾಂತರಕ್ಕಾಗಿ ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿದೆವು. ಇದರಿಂದ ಉತ್ತಮ ಸಂವಹನ ಸಾಧ್ಯವಾಯಿತು” ಎಂದು ತಿಳಿಸಿದರು.

ಭಾರತದ ಡಿಜಿಟಲ್‌ ಕ್ರಾಂತಿಗೆ ಬಿಲ್‌ ಗೇಟ್ಸ್‌ ಶ್ಲಾಘನೆ

ಭಾರತದಲ್ಲಿ ಡಿಜಿಟಲ್‌ ಮೂಲ ಸೌಕರ್ಯಗಳ ಹೆಚ್ಚಳದಿಂದ ಉಂಟಾಗಿರುವ ಡಿಜಿಟಲ್‌ ಕ್ರಾಂತಿಯ ಕುರಿತು ಬಿಲ್‌ ಗೇಟ್ಸ್‌ ಶ್ಲಾಘನೆ ವ್ಯಕ್ತಪಡಿಸಿದರು. “ಭಾರತವು ಡಿಜಿಟಲ್‌ ಮೂಲ ಸೌಕರ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಮಹಿಳೆಯರು ಕೂಡ ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ತಂತ್ರಜ್ಞಾನದ ಅಳವಡಿಕೆಯಲ್ಲಿ ಭಾರತವು ಮುಂದಿದೆ” ಎಂದು ಹೇಳಿದರು. ಹಾಗೆಯೇ, ಕೃತಕ ಬುದ್ಧಿಮತ್ತೆಯಿಂದ ಎದುರಾಗುವ ಸವಾಲುಗಳ ಕುರಿತು ಕೂಡ ಬಿಲ್‌ ಗೇಟ್ಸ್‌ ಪ್ರಸ್ತಾಪಿಸಿದರು.

ನನಗೆ ತಂತ್ರಜ್ಞಾನದ ಗೀಳು ಎಂದ ಮೋದಿ

ಬಿಲ್‌ ಗೇಟ್ಸ್‌ ಜತೆಗಿನ ಮಾತುಕತೆ ವೇಳೆ ನರೇಂದ್ರ ಮೋದಿ ಅವರು ತಂತ್ರಜ್ಞಾನದ ಬಳಕೆ ಕುರಿತು ಮಾತನಾಡಿದರು. “ನನಗೆ ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಗ್ಯಾಜೆಟ್‌ಗಳು ಸೇರಿ ಹಲವು ಡಿವೈಸ್‌ಗಳನ್ನು ಬಳಸುವುದು ನನಗೆ ರೂಢಿಯಾಗಿದೆ. ನಾನು ಅಮೆರಿಕಕ್ಕೆ ಹೋದಾಗ ಮಾಲ್‌ಗಳಿಗೆ ಹೋಗಿ ಗ್ಯಾಜೆಟ್‌ಗಳನ್ನು ಖರೀದಿಸುತ್ತಿದ್ದೆ. ಭಾರತದಲ್ಲೂ ಈ ತಂತ್ರಜ್ಞಾನ ಬರಬೇಕು ಎಂದು ಬಯಸುತ್ತಿದ್ದೆ. ಈಗ ಅದು ಸಾಕಾರವಾಗುತ್ತಿದೆ. ಹಾಗಂತ, ನಾನು ತಂತ್ರಜ್ಞಾನದ ಗುಲಾಮನಲ್ಲ. ಬಹೋಪಯೋಗಿ ಕಾರಣಗಳಿಗಾಗಿ ಟೆಕ್ನಾಲಜಿಯನ್ನು ಬಳಸುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

ಮೋದಿ ಪ್ರಸ್ತಾಪಿಸಿದ ಪ್ರಮುಖ ವಿಷಯಗಳು

ಬಿಲ್‌ ಗೇಟ್ಸ್‌ ಜತೆಗಿನ ಮಾತುಕತೆ ವೇಳೆ ನರೇಂದ್ರ ಮೋದಿ ಅವರು ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿದರು. ಭಾರತದಲ್ಲಿ ಮೂಲ ಸೌಕರ್ಯಗಳ ಹೆಚ್ಚಳ, ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿ ಬಳಕೆ, ಡಿಜಿಟಲ್‌ ಇಂಡಿಯಾ ಕಲ್ಪನೆಯ ಜಾರಿ, ಲಕ್‌ಪತಿ ದೀದಿ ಯೋಜನೆಯ ಯಶಸ್ಸು, ಡೀಪ್‌ಫೇಕ್‌ ತಂತ್ರಜ್ಞಾನದ ದುರ್ಬಳಕೆ, ಆಯುಷ್ಮಾನ್‌ ಭಾರತ್‌ ಯೋಜನೆ, ಪರಿಶ್ರಮ, ಹವ್ಯಾಸಗಳು ಸೇರಿ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version