ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ (Mandi) ಲೋಕಸಭೆ ಕ್ಷೇತ್ರದಲ್ಲಿ (Lok Sabha Election 2024) ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಮೇ 24) ಪ್ರಚಾರ ನಡೆಸಿದ್ದಾರೆ. ಮಂಡಿಯಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ಆಗಮಿಸಿದ ಮೋದಿ ಅವರು ಕಂಗನಾ ಪರ ಮತಯಾಚನೆ ಮಾಡಿದರು. ಇನ್ನು ನರೇಂದ್ರ ಮೋದಿ ಅವರು ವೇದಿಕೆಗೆ ಬರುತ್ತಲೇ ಕಂಗನಾ ರಣಾವತ್ ಅವರು ಕೆಂಪು ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಈ ಫೋಟೊ ಈಗ ವೈರಲ್ ಆಗಿದೆ.
ನರೇಂದ್ರ ಮೋದಿ ಅವರು ಮಂಡಿಯಲ್ಲಿ ಪ್ರಚಾರ ನಡೆಸಿದ, ಗುಲಾಬಿ ಹೂವು ನೀಡಿದ ಫೋಟೊಗಳನ್ನು ಕಂಗನಾ ರಣಾವತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೋದಿ ಅವರು ಆಗಮಿಸುವ ಮೊದಲು ಚುನಾವಣೆ ಸಮಾವೇಶ ಉದ್ದೇಶಿಸಿ ಕಂಗನಾ ಮಾತನಾಡಿದರು. “ನನಗೆ ಬಾಲಿವುಡ್‌ನಲ್ಲಿ ಹೊರಗಿನವಳು, ಇಂಗ್ಲಿಷ್ ಬರಲ್ಲ ಎಂಬುದಾಗಿ ಮೂದಲಿಸುತ್ತಿತ್ತು. ಆದರೆ, ಜಗತ್ತಿನ ದೊಡ್ಡ ಪಕ್ಷವಾದ ಬಿಜೆಪಿ ಹಾಗೂ ಜಗತ್ತಿನ ಧೀಮಂತ ನಾಯಕರಾದ ಮೋದಿ ಅವರು ನನ್ನನ್ನು ಗುರುತಿಸಿ, ಮಂಡಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ” ಎಂದು ಹೇಳಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್ ಘೋಷಣೆ ಮಾಡಿದ್ದಾರೆ. ಆಜ್ ತಕ್ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದಾರೆ. “ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.
91 ಕೋಟಿ ರೂ. ಆಸ್ತಿಗೆ ಒಡತಿ
ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಕಂಗನಾ ರಣಾವತ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಚುನಾವಣಾ ಅಫಿಡವಿಟ್ ನಲ್ಲಿ 91 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಅವರ ಆಸ್ತಿಯಲ್ಲಿ 28.7 ಕೋಟಿ ರೂ.ಗಳ ಚರಾಸ್ತಿ ಮತ್ತು 62.9 ಕೋಟಿ ರೂ.ಗಳ ಸ್ಥಿರಾಸ್ತಿ ಸೇರಿವೆ. ಅವರ ಬಳಿ 5 ಕೋಟಿ ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ಮೌಲ್ಯದ 60 ಕೆಜಿ ಬೆಳ್ಳಿ, 3 ಕೋಟಿ ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳಿವೆ. 2 ಲಕ್ಷ ನಗದು ಮತ್ತು ಸುಮಾರು 1.35 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವುದಾಗಿ ನಟಿ ಹಾಗೂ ರಾಜಕಾರಣಿ ಘೋಷಿಸಿದ್ದಾರೆ.
ಇದನ್ನೂ ಓದಿ: Kangana Ranaut: ಕಂಗನಾ ರಣಾವತ್ ಮೇಲೆ ಕಲ್ಲು ತೂರಾಟ; ಚು.ಆಯೋಗಕ್ಕೆ ದೂರು