ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಸಹೋದರತ್ವ ಸಾರುವ ರಕ್ಷಾಬಂಧನವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಪಾಕಿಸ್ತಾನದ ಮಹಿಳೆಯೊಬ್ಬರು ಮೋದಿ ಅವರಿಗೆ ಪ್ರತಿ ವರ್ಷ ರಾಖಿ ಕಟ್ಟುತ್ತಾರೆ ಇಲ್ಲವೇ ಕಳುಹಿಸುತ್ತಾರೆ. ಈ ಬಾರಿಯೂ ನರೇಂದ್ರ ಮೋದಿ (Narendra Modi) ಅವರು ವಿಶಿಷ್ಟವಾಗಿ ರಕ್ಷಾಬಂಧನವನ್ನು (Raksha Bandhan 2023) ಆಚರಿಸಿದ್ದಾರೆ. ದೆಹಲಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಮೋದಿ ಹಬ್ಬ ಆಚರಿಸಿದ್ದಾರೆ.
ದೆಹಲಿ ಶಾಲೆಯೊಂದಕ್ಕೆ ತೆರಳಿದ ನರೇಂದ್ರ ಮೋದಿ ರಕ್ಷಾಬಂಧನ ಆಚರಿಸಿದ್ದರು. ಆರೇಳು ವರ್ಷದ ವಿದ್ಯಾರ್ಥಿನಿಯರು ಒಬ್ಬೊಬ್ಬರೇ ಬಂದು ಮೋದಿ ಅವರಿಗೆ ರಾಖಿ ಕಟ್ಟಿದರು. ಮೋದಿ ಅವರೂ ಮಕ್ಕಳೊಂದಿಗೆ ಕಾಲ ಕಳೆಯುವ ಜತೆಗೆ ಅವರ ಹೆಸರು, ಪರಿಚಯ ತಿಳಿದುಕೊಂಡರು. ಮೋದಿ ಅವರಿಗೆ ರಾಖಿ ಕಟ್ಟಿದ ಖುಷಿ ಚಿಣ್ಣರಲ್ಲಿ ಎದ್ದು ಕಾಣುತ್ತಿತ್ತು. ಮೋದಿ ರಕ್ಷಾಬಂಧನ ಆಚರಣೆ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ರಕ್ಷಾಬಂಧನ ಶುಭಾಶಯ ತಿಳಿಸಿದ ಮೋದಿ
ರಕ್ಷಾಬಂಧನದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ. “ದೇಶದ ಸಂಸ್ಕೃತಿಯಲ್ಲಿ ರಕ್ಷಾಬಂಧನ ಹಬ್ಬಕ್ಕೆ ವಿಶೇಷ ಗೌರವ ಇದೆ. ಸಹೋದರ, ಸಹೋದರಿ ನಡುವೆ ಬಾಂಧವ್ಯ, ಪ್ರೀತಿಯನ್ನು ವೃದ್ಧಿಸುವ ರಕ್ಷಾಬಂಧನವನ್ನು ಆಚರಿಸೋಣ. ದೇಶದ ಜನತೆಗೆ ರಕ್ಷಾಬಂಧನದ ಶುಭಾಶಯಗಳು” ಎಂದು ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Gold Rate Today: ರಕ್ಷಾಬಂಧನದಂದು ಬಂಗಾರದ ದರ ಏರಿಕೆ, ಬೆಳ್ಳಿ ಬೆಲೆ ಯಥಾಸ್ಥಿತಿ
ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ (ಆಗಸ್ಟ್ 29) ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 200 ರೂ. ಇಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ದೇಶದ ಜನರಿಗೆ ಮೋದಿ ರಕ್ಷಾಬಂಧನದ ಉಡುಗೊರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಮೋದಿ ಅವರೂ ಸಹೋದರಿಯರಿಗಾಗಿ ಬೆಲೆ ಇಳಿಕೆ ಮಾಡಲಾಗಿದೆ ಎಂದಿದ್ದಾರೆ.
ಯೋಧರಿಗೆ ರಾಖಿ ಕಟ್ಟಿದ ಯುವತಿಯರು
ಜಮ್ಮು-ಕಾಶ್ಮೀರದ ಅಖನೂರ್ ಸೆಕ್ಟರ್‌ನಲ್ಲಿ ದೇಶದ ಯೋಧರಿಗೆ ಯುವತಿಯರು ರಾಖಿ ಕಟ್ಟಿದರು. ಆ ಮೂಲಕ ದೇಶದ ಗಡಿ ಕಾಯುವ ಯೋಧರಿಗೆ ತಮ್ಮ ಸಹೋದರಿಯರ ನೆನಪು ಅಷ್ಟಾಗಿ ಕಾಡದಂತೆ ಮಾಡಿದರು. ಯುವತಿಯರು ಯೋಧರಿಗೆ ರಾಖಿ ಕಟ್ಟಿದ ವಿಡಿಯೊಗಳು ಕೂಡ ವೈರಲ್ ಆಗಿವೆ.