ನವದೆಹಲಿ: ದೇಶದ ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ದೇಶಕ್ಕೆ ದೇಶವೇ ಸ್ವಾತಂತ್ರ್ಯದ ಸಂಭ್ರಮ ಆಚರಿಸಲು ಸಿದ್ಧವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಸಾಮಾಜಿಕ ಜಾಲತಾಣದ (X Social Media) ಪ್ರೊಫೈಲ್ ಪಿಕ್ಚರ್ ಬದಲಾಯಿಸಿದ್ದಾರೆ. ತಿರಂಗಾವನ್ನೇ ಡಿಪಿಯನ್ನಾಗಿ ಮಾಡಿರುವ ನರೇಂದ್ರ ಮೋದಿ (Narendra Modi) ಅವರು ದೇಶದ ಜನತೆಗೂ ಹರ್ ಘರ್ ತಿರಂಗಾ (Har Ghar Tiranga) ಅಭಿಮಾನಕ್ಕೆ ಕರೆ ನೀಡಿದ್ದಾರೆ.
“ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರೂ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ, ಸ್ಮರಣೀಯಗೊಳಿಸೋಣ. ನಾನು ನನ್ನ ಖಾತೆಯ ಪ್ರೊಫೈಲ್ ಫೋಟೊವನ್ನು ಬದಲಾಯಿಸಿದ್ದೇನೆ. ನೀವು ಕೂಡ ನಿಮ್ಮ ಪ್ರೊಫೈಲ್ ಫೋಟೊವನ್ನು ತಿರಂಗಾವನ್ನೇ ಸೆಟ್ ಮಾಡಿಕೊಳ್ಳುವ ಮೂಲಕ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು ತರೋಣ” ಎಂದು ಪ್ರೊಫೈಲ್ ಫೋಟೊ ಬದಲಾಯಿಸಿದ ಬಳಿಕ ನರೇಂದ್ರ ಮೋದಿ ಅವರು ಪೋಸ್ಟ್ ಮಾಡಿದ್ದಾರೆ.
As this year’s Independence Day approaches, let’s again make #HarGharTiranga a memorable mass movement. I am changing my profile picture and I urge you all to join me in celebrating our Tricolour by doing the same. And yes, do share your selfies on https://t.co/0CtV8SCePz
— Narendra Modi (@narendramodi) August 9, 2024
“ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಸತತ ಮೂರನೇ ಆವೃತ್ತಿಯ ಹರ್ ಘರ್ ತಿರಂಗಾ ಅಭಿಯಾನವನ್ನು ಆಗಸ್ಟ್ 9ರಿಂದ 15ರವರೆಗೆ ಆಚರಿಸಲಾಗುತ್ತದೆ” ಎಂಬುದಾಗಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಾಹಿತಿ ನೀಡಿದ್ದಾರೆ. ಹಾಗೆಯೇ, ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ತಿರಂಗಾ ಹಾರಿಸಿ, ಆ ತಿರಂಗಾ ಜತೆ ಇರುವ ಫೋಟೊವನ್ನು ಹರ್ ಘರ್ ತಿರಂಗಾ ವೆಬ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ ಎಂದು ತಿಳಿಸಿದರು.
ಈ ಬಾರಿಯ ಅಭಿಯಾನದ ಭಾಗವಾಗಿ ಸಂಸತ್ ಸದಸ್ಯರು ತಿರಂಗಾ ಬೈಕ್ ರ‍್ಯಾಲಿಯನ್ನೂ ಕೈಗೊಳ್ಳಲಿದ್ದಾರೆ. ಆಗಸ್ಟ್ 13ರಂದು ಭಾರತ ಮಂಟಪಂನ ಪ್ರಗತಿ ಮೈದಾನದಿಂದ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂವರೆಗೆ ತಿರಂಗಾ ಬೈಕ್ ರ‍್ಯಾಲಿಯನ್ನು ಕೈಗೊಳ್ಳಲಾಗುತ್ತಿದೆ. ಸಂಸದರು ಬೈಕ್‌ಗೆ ತಿರಂಗಾ ಕಟ್ಟಿಕೊಂಡು ಇಂಡಿಯಾ ಗೇಟ್ ಮೂಲಕ ಸ್ಟೇಡಿಯಂಗೆ ತಲುಪಲಿದ್ದಾರೆ. ಇದಕ್ಕೂ ಮೊದಲಿನ ಅಭಿಯಾನಗಳಿಗೂ ದೇಶದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
ಇದನ್ನೂ ಓದಿ: Vinesh Phogat: ಪ್ರಕಾಶ್ ರೈ ವಿರುದ್ಧ ಅಹಿಂಸಾ ಚೇತನ್ ಕಿಡಿ; ಮೋದಿ ಪರ ಬ್ಯಾಟಿಂಗ್ ಮಾಡಿ ʼರೈ ಅಜ್ಞಾನಿʼ ಎಂದ ನಟ